ಕರಾವಳಿ

ನೇರಪ್ರಸಾರದ ಆಡಿಯೋ ತಿರುಚಿದ ಆರೋಪ : ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಪೊಲೀಸ್ ವಶಕ್ಕೆ

Pinterest LinkedIn Tumblr

ಮಂಗಳೂರು, ಜೂನ್.09: ಖಾಸಗಿ ಟಿವಿ ಚಾನಲ್ ವೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮದ ಆಡಿಯೋ ತಿರುಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿಯನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಜೊತೆ ಚಿಕ್ಕಮಗಳೂರು ಮೂಲದ ಬಿಜೆಪಿ ಕಾರ್ಯಕರ್ತೆಯೊಬ್ಬರು ಕರೆ ಮಾಡಿ ಪ್ರಶಂಶಿಸಿ ಮಾತನಾಡಿದ್ದ ಆಡಿಯೋವೊಂದನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ಆರೋಪದ ಮೇಲೆ ಸುನಿಲ್ ಬಜಿಲಕೇರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ನಡೆದ ಖಾಸಗಿ ಟಿವಿ ವಾಹಿನಿಯೊಂದರ ನೇರಪ್ರಸಾರದ ಕಾರ್ಯಕ್ರಮದಲ್ಲಿ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮುಖ್ಯ ಅತಿಥಿಯಾಗಿ ಭಾಗಹಿಸಿದ್ದು, ನೇರಪ್ರಸಾರದ ಕಾರ್ಯಕ್ರಮದಲ್ಲಿ ವೀಕ್ಷಕರು ಕರೆ ಮಾಡಿ ಮಾತನಾಡಬಹುದಿತ್ತು.

ಈ ಸಂದರ್ಭ ಕರೆ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಸಂಸದರ ಕಾರ್ಯ ವೈಕರಿಗೆ ಪ್ರಶಂಶೆ ವ್ಯಕ್ತಪಡಿಸಿ, ಪಕ್ಷ ಕಟ್ಟುವಾಗ ಕೆಲವು ಸಮಸ್ಯೆ ಎದುರಾಗುತ್ತದೆ. ಟೀಕೆಯನ್ನು ಗಂಭೀರವಾಗಿ ಪರಿಗಣಿಸದೆ ಜವಾಬ್ದಾರಿ ನಿಭಾಯಿಸಿ ಎಂದು ಸಲಹೆ ನೀಡಿದ್ದರು.

ಆದರೆ, ಈ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಯುವತಿಯೋರ್ವಳು ಕರೆ ಮಾಡಿ ಮಾತನಾಡಿ ಸಂಸದರನ್ನು ನಿಂದಿಸುವುದು ಆ ವಿಡಿಯೋ ತುಣುಕಿನಲ್ಲಿತ್ತು. ಕಾರ್ಯಕ್ರಮ ನೈಜ ಆಡಿಯೋ ಬಳಕೆ ಮಾಡದೆ ಆಡಿಯೋ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಅಂದರೆ ಯುವತಿಯೊಬ್ಬಳು ಈ ಹಿಂದೆ ಯಾರಿಗೋ ಕರೆ ಮಾಡಿ ತರಾಟೆಗೆ ತೆಗೆದುಕೊಂಡದ್ದನ್ನು ನಳಿನ್ ಕುಮಾರ್ ಕಟೀಲ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ ಎಂಬಂತೆ ಬಿಂಬಿಸಲಾಗಿತ್ತು.

ಇದರ ಹಿಂದೆ ಸುನಿಲ್ ಬಜಿಲಕೇರಿಯ ಕೈವಾಡ ಇದೆ ಎಂಬ ಶಂಕೆ ವ್ಯಕ್ತಪಡಿಸಿ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬರ್ಕೆ ಪೊಲೀಸರು ಸುನೀಲ್ ಬಜಿಲಕೇರಿಯವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಸುನೀಲ್ ಬಜಿಲಕೇರಿ ಬಳಿಕ ಅದರಿಂದ ದೂರ ಸರಿದಿದ್ದರು. ಬಳಿಕ ಬಜರಂಗದಳ ಹಾಗೂ ಶ್ರೀರಾಮ ಸೇನೆಯ ಮಾಜಿ ಮುಖಂಡ ಪ್ರವೀಣ್ ವಾಲ್ಕೆಯ ಜೊತೆಗೂಡಿ ಹಿಂದುತ್ವಕ್ಕೆ ವಿರುದ್ಧವಾಗಿ ಬಂಧುತ್ವ ಎಂಬ ಸಂಘಟನೆಯನ್ನು ಸ್ಥಾಪಿಸಿ ಬಿಜೆಪಿಯ ಸಂಸದರು, ಶಾಸಕರ ಕಾರ್ಯವೈಖರಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಪ್ರಶ್ನಿಸುತ್ತಿದ್ದ ಆರೋಪ ಎದುರಿಸುತ್ತಿದ್ದರು.

Comments are closed.