ಕರಾವಳಿ

ಜಾದೂ ಕಲಾವಿದರ ಅನ್ನಕ್ಕೂ ಕನ್ನವಿಕ್ಕಿದ ಮಹಾ ಮಾರಿ ಕೋವಿಡ್ : ಹೈರಾಣಾಗಿದೆ ಕಲೆಯನ್ನೇ ನಂಬಿಕೊಂಡಿದ್ದ ಕಲಾವಿದರ ಬದುಕು! -ಗಮನಿಸೀತೆ ಸರಕಾರ?

Pinterest LinkedIn Tumblr

ಮಂಗಳೂರು: ಸತತವಾಗಿ ಕಾಡುತ್ತಿರುವ ಕೊರೋನಾ ವೈರಸ್ ಕೋಟ್ಯಂತರ ಮಂದಿಯ ಅನ್ನವನ್ನೇ ಕಸಿದುಕೊಂಡಿದೆ. ಈ ಮಹಾ ಮಾರಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಲೆಕ್ಕವಿಲ್ಲ. ಸದ್ಯ ಕೊರೋನಾ ಲಾಕ್‌ಡೌನ್‌ನಿಂದಾಗಿ ಜನತೆ ಮನೆಯಲ್ಲಿ ಲಾಕ್ ಆಗಿದ್ದಾರೆ.

ನಿತ್ಯ ಕೂಲಿ ಕೆಲಸ ಮಾಡಿಕೊಂಡು ತಮ್ಮ ಕುಟುಂಬವನ್ನು ಖುಷಿಯಿಂದ ಮುನ್ನಡೆಸಿಕೊಂಡು ಬರುತ್ತಿದ್ದ ಮಂದಿ ಈಗ ಕೆಲಸವಿಲ್ಲದೆ ಯಾರೋ ನೀಡುವ ದಿನಸಿ ಕಿಟ್‌ಗಾಗಿ ಎದುರು ನೋಡುವ ಸ್ಥಿತಿ ಎದುರಾಗಿದೆ.

ಇವರ ಸ್ವಾಭಿಮಾನದ ಬದುಕಿಗೂ ಪೆಟ್ಟು ಬಿದ್ದಿರುವುದು ಅಷ್ಟೇ ಸತ್ಯ. ಸಣ್ಣ ಪುಟ್ಟ ಉದ್ಯಮ ನಡೆಸುತ್ತಿದ್ದವರು, ಕುಲಕಸುಬುದಾರರು, ಯಕ್ಷಗಾನ, ಸಂಗೀತ, ನಾಟಕ ಕಲಾವಿದರೂ…ಹೀಗೆ ಪ್ರತಿಯೊಬ್ಬರ ಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಎಲ್ಲರಿಗೂ ಕೊರೋನಾ ಬಲವಾದ ಹೊಡೆತವನ್ನೇ ನೀಡಿದೆ.

ಕೊರೋನಾದಿಂದಾಗಿ ಸಂಕಷ್ಟಕ್ಕೊಳಗಾದವರ ಸಾಲಿನಲ್ಲಿ ಜಾದೂ ಕಲಾವಿದರೂ ಸೇರಿದ್ದಾರೆ. ಪ್ರೇಕ್ಷಕರನ್ನು ಚಮತ್ಕಾರದ ಮೂಲಕ ನಿಬ್ಬೆರಗಾಗಿಸುತ್ತಿದ್ದ, ತಮ್ಮ ಕೈಚಳಕದಿಂದ ಮೋಡಿ ಮಾಡುತ್ತಿದ್ದ ನೂರಾರು ಕಲಾವಿದರಿಗೆ ಈಗ ಕೆಲಸವಿಲ್ಲ. ಪೂರ್ಣ ಪ್ರಮಾಣದಲ್ಲಿ ಜಾದೂ ಕಲೆಯಲ್ಲೇ ತೊಡಗಿಸಿಕೊಂಡವರನ್ನಂತೂ ಮುಂದೇನು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ.

 ಮಾಯ ಮಾಡುತ್ತಿದ್ದವರೀಗ ಮೌನ! 

ಜಾತ್ರೆಯೋ, ದೊಡ್ಡ ಮಟ್ಟದ ಕಾರ್ಯಕ್ರಮಗಳೋ ನಡೆದರೆ ಈ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೊಂದು ಚಾನ್ಸ್ ಸಿಗುತ್ತಿತ್ತು. ಸಿಕ್ಕ ಅವಕಾಶದಲ್ಲಿಯೇ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದವರು ಈ ಕಲಾವಿದರು.

ಇವರ ಜಾದೂ ಕಲಾ ಪ್ರದರ್ಶನದ ಜೊತೆ ಜೊತೆಗೆ ಮಾತಿನ ಮೋಡಿಯೂ ನೋಡುಗರನ್ನು ಆಕರ್ಷಿಸದೇ ಇರಲಾರದು. ಕೈಯಲ್ಲಿ ಹಿಡಿದ ಹಗ್ಗವೊಂದು ಹೂವಾಗಿ ಬದಲಾಗುವುದು, ಪುಟ್ಟ ಕಾಗದವೊಂದು ಪಾರಿವಾಳವಾಗುವುದು, ಖಾಲಿಯಿದ್ದ ಬಾಕ್ಸ್‌ನಿಂದ ಚೂ ಮಂತ್ರವೆಂದೊಡನೆ ಚಂಗನೆ ಎದ್ದು ಬರುವ ಸುಂದರಿ…ಹೀಗೆ ಜಾದೂಗಾರರು ಮಾಡುವ ಮೋಡಿಗೆ ಬೆರಾಗಾಗದವರೇ ಇಲ್ಲ.

ಎದುರಿಗಿದ್ದವರನ್ನೇ ಕೆಲಕಾಲ ಮಾಯ ಮಾಡುವ ಕಲಾ ಪ್ರೌಢಿಮೆ ಹೊಂದಿರುವ ಜಾದೂಗಾರರೀಗ ಮೌನವಾಗಿದ್ದಾರೆ. ಕೊರೋನಾ ಮತ್ತು ಲಾಕ್‌ಡೌನ್ ಅವರನ್ನು ಕಳೆದೊಂದು ವರ್ಷದಿಂದ ಕಟ್ಟಿಹಾಕಿಬಿಟ್ಟಿದೆ.

ಹೊಸದನ್ನೇ ಬಯಸುವ ಪ್ರೇಕ್ಷಕ!

ಸದಾ ಅಪ್‌ಡೇಟ್ ಆಗುತ್ತಿದ್ದರೆ ಮಾತ್ರ ಈ ಕಲೆ, ಕಲಾವಿದನಿಗೆ ಜೀವಂತಿಕೆ. ಹೊಸತನದೊಂದಿಗೆ ಎದುರು ಬಂದರಷ್ಟೇ ಪ್ರೇಕ್ಷಕನಿಗೆ ಆಪ್ತವಾಗುತ್ತಾರೆ. ಒಂದೇ ರೀತಿಯ ಜಾದೂವನ್ನು ಮತ್ತೆ ಮತ್ತೆ ಪ್ರದರ್ಶಿಸಿದರೆ ಪ್ರೇಕ್ಷಕನಿಗೆ ಬೋರಾಗಿಬಿಡುತ್ತಾರೆ. ಆದ್ದರಿಂದ ಹೊಸತನಕ್ಕಾಗಿ ಜಾದೂ ಕಲಾವಿದರೂ ನಿತ್ಯ ಕಸರತ್ತು ನಡೆಸುತ್ತಲೇ ಇರುತ್ತಾರೆ. ಹೊಸ ಹೊಸ ಜಾದೂ ಕಲೆಯನ್ನು ಕಲಿಯುವುದರಲ್ಲಿಯೇ ಇವರು ಮಗ್ನವಾಗಿಬಿಟ್ಟಿರುತ್ತಾರೆ. ಸಿಕ್ಕ ಅವಕಾಶಗಳಲ್ಲಿ ಬದುಕಿನ ದಾರಿಗೆ ಒಂದಷ್ಟನ್ನು ಕೂಡಿಡಬೇಕು. ಆದರೆ ಅವರ ಕೈಚಳಕವನ್ನು ಈಗ ಕೊರೋನಾ ಕಟ್ಟಿ ಹಾಕಿಬಿಟ್ಟಿದೆ!

ನಮ್ ಸ್ಥಿತಿ ಏನ್ ಹೇಳೋದು ಸ್ವಾಮಿ!

`ಕರಾವಳಿಯಲ್ಲಿ ಜಾತ್ರೆ, ವಿಶೇಷ ಸಮಾರಂಭಗಳು ಇದ್ದಾಗ ಜಾದೂ ಕಲಾವಿದರಿಗೆ ಅವಕಾಶಗಳು ದೊರೆಯುತ್ತಿತ್ತು. ಕೊರೋನಾದಿಂದಾಗಿ ಈಗ ಅವಕಾಶಗಳೇ ಕೈ ತಪ್ಪಿ ಹೋಗುತ್ತಿವೆ. ಸಣ್ಣ ಪುಟ್ಟ ಶೋ ಮಾಡಿಕೊಂಡು ಬದುಕು ಕಟ್ಟಿಕೊಂಡವವರಿಗೆ ಕೊರೋನಾ ಬಲವಾದ ಹೊಡೆತ ನೀಡಿದೆ.

ಈ ಕಲೆಯನ್ನೇ ಬದುಕಾಗಿಸಿಕೊಂಡ ನಮ್ಮಂತವರ ಸ್ಥಿತಿಯನ್ನು ಏನಂತ ಹೇಳೋದು ಸ್ವಾಮಿ, ಈ ಕಲೆಯನ್ನೇ ನಂಬಿ ಬದುಕಿದ್ದೇವೆ. ಆದರೆ ಕಲೆಯೊಂದಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳದ ನಾವುಗಳು ಆತಂಕಕ್ಕೆ ಸಿಲುಕಿರುವುದು ನಿಜ. ಕೊರೋನಾ ಆರಂಭವಾದಾಗಿನಿಂದ ನಮ್ಮ ಬದುಕಿಗೆ ಪೆಟ್ಟು ಬಿದ್ದಿರುವುದಂತೂ ಸತ್ಯ’ ಎನ್ನುತ್ತಾರೆ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂ ಕಲಾವಿದ ಕುದ್ರೋಳಿ ಗಣೇಶ್ ಅವರು.

ಅಂತಾರಾಷ್ಟ್ರೀಯ ಖ್ಯಾತಿಯ ಜಾದೂ ಕಲಾವಿದ ಕುದ್ರೋಳಿ ಗಣೇಶ್

ಕಲೆಯನ್ನೇ ಬದುಕಾಗಿಸಿಕೊಂಡವರಿಗೆ ಕಷ್ಟ: 

ಕರ್ನಾಟಕದಲ್ಲಿ ಸುಮಾರು 300ರಷ್ಟು ಜಾದೂ ಕಲಾವಿದರಿದ್ದಾರೆ. ಪಾರ್ಟ್ ಟೈಂ ಮತ್ತು ಫುಲ್ ಟೈಮ್ ಆಗಿ ಈ ಕಲೆಯನ್ನು ನೆಚ್ಚಿಕೊಂಡವರಿದ್ದಾರೆ. ಆದರೆ ಪೂರ್ಣವಾಗಿ ಜಾದೂವನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ನಮ್ಮಂತವರು ಕೊರೋನಾ ಲಾಕ್‌ಡೌನ್‌ನಿಂದಾಗಿ ತತ್ತರಿಸಿಹೋಗಿದ್ದೇವೆ. ಹೊಸ ನಾಳೆಗಳ ನಿರೀಕ್ಷೆಯಲ್ಲಿದ್ದೇವೆ. ಲಾಕ್‌ಡೌನ್‌ನಲ್ಲಿ ಹೊಸ ಹೊಸ ಜಾದೂ ಕಲಿಕೆಗೆ ಈ ಸಮಯವನ್ನು ವಿನಿಯೋಗಿಸುತ್ತಿದ್ದೇವೆ.: ಕುದ್ರೋಳಿ ಗಣೇಶ್ -ಅಂತಾರಾಷ್ಟ್ರೀಯ ಖ್ಯಾತಿಯ ಜಾದೂ ಕಲಾವಿದರು 

ವರದಿ ಕೃಪೆ : ಸುರೇಶ್.ಡಿ.ಪಳ್ಳಿ – ಹಿರಿಯ ವರದಿಗಾರರು, ಹೊಸದಿಗಂತ.

Comments are closed.