ಕರಾವಳಿ

ಈ ಮೂರು ಸೂತ್ರದಿಂದ ಕೊರೋನಾ ನಿಯಂತ್ರಣ ಸಾಧ್ಯ: ಡಾ. ರಾಜೇಂದ್ರ ಕೆ.ವಿ

Pinterest LinkedIn Tumblr

ಮಂಗಳೂರು, ಮೇ 23 : ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್‍ಮೆಂಟ್ ಸೂತ್ರದಿಂದ ಕೊರೋನಾ ನಿಯಂತ್ರಣ ಸಾಧ್ಯ. ಕೋವಿಡ್ ಸೋಂಕಿತರ ಸಂಪರ್ಕಿತರನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆಯನ್ನು ನಡೆಸಿ ಸೋಂಕು ಹೊಂದಿದಲ್ಲಿ ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದರಿಂದ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.

ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತು ವೈದ್ಯಕೀಯ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೋವಿಡ್ ಸೋಂಕಿತರ ಪ್ರಮಾಣವನ್ನು ಕಡಿಮೆಗೊಳಿಸಲು ಕೋವಿಡ್ ಸೋಂಕು ದೃಢಪಟ್ಟವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು ಗುರುತಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಿ ಸೋಂಕು ಹೊಂದಿದಲ್ಲಿ ಅವರನ್ನು ಪ್ರತ್ಯೇಖಿಸಿ ಚಿಕಿತ್ಸೆ ನೀಡಿದಾಗ ಸೋಂಕು ನಿಯಂತ್ರಣ ತರಲು ಸಾಧ್ಯ, ಕೋವಿಡ್ ಪರೀಕ್ಷೆಯ ಫಲಿತಾಂಶವನ್ನು 24 ಗಂಟೆಯ ಒಳಗಾಗಿ ನೀಡಲಾಗುತ್ತಿರುವುದು ಸೊಂಕಿತರನ್ನು ಪ್ರತ್ಯೇಕಗೊಳಿಸಿ ಆರಂಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗಿದೆ ಎಂದರು.

ಜಿಲ್ಲೆಯಲ್ಲಿ 10,398 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 1,470 (ಶೇ13.26ರಷ್ಟು) ರೋಗಿಗಳು ಆಸ್ಪತ್ರೆಯಲ್ಲಿ, 8,928(ಶೇ 85.86ರಷ್ಟು) ಮನೆಯಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 91 (ಶೇ0.88) ಚಿಕಿತ್ಸೆ ಪಡೆಯುತ್ತಿದ್ದಾರೆ ಕಳೆದ ಏಳು ದಿನಗಳಿಂದ ಕೋವಿಡ್ ಪರೀಕ್ಷೆಯಲ್ಲಿ ಶೇಕಡ 31.58 ರಷ್ಟು ಸೋಂಕು ದೃಡ ಪಡುವ ಪ್ರಕರಣಗಳು ಕಂಡುಬರುತ್ತಿವೆ. ಪ್ರತಿದಿನ ಗುಣ ಹೊಂದುವವರ ಪ್ರಮಾಣವು ಶೇಕಡ 84 .63 ಇದ್ದಾರೆ ಮರಣ ಪ್ರಮಾಣವು ಶೇಕಡ 1.23 ರಷ್ಟು ಇದೆ.

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 6882 ಬೆಡ್ ಗಳಿದ್ದು ಅವುಗಳಲ್ಲಿ 1,470 ರೋಗಿಗಳ ಬಳಕೆಯಲ್ಲಿದರೆ 5,412 ಬೆಡ್ ಗಳು ಖಾಲಿ ಇವೆ, ಸಾಮಾನ್ಯ ಬೆಡ್‍ಗಳಲ್ಲಿ 472 ,ಆಕ್ಸಿಜನ್ ಬೆಡ್ ನಲ್ಲಿ 555, ಹೈ ಪೊಲೀ ಆಕ್ಸಿಜನ್ ಬೆಡ್ ಗಳಲ್ಲಿ 114 ,ಐ. ಸಿ. ಯು ನಲ್ಲಿ 146, ವೆಂಟಿಲೇಟರ್ ನಲ್ಲಿ 183 ಸೇರಿದಂತೆ 1470 ರಷ್ಟು ಭರ್ತಿಯಾಗಿವೆ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಗರಿಷ್ಠ ಮುಂಜಾಗೃತೆಯನ್ನು ವಹಿಸಿ ಸ್ಟಿರಾಯಿಡ್ ಗಳನ್ನು ಡಯಾಬಿಟಿಸ್ ಹಾಗೂ ಅತಿಯಾದ ಅನಾರೋಗ್ಯಕ್ಕೆ ಒಳಗಾದವರಿಗೆ ನೀಡಬೇಕು, ಕ್ಷಿನಿಕ್ ಗಳಲ್ಲಿ ಹೊರರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸ್ಟಿರಾಯಿಡ್ ಗಳನ್ನು ನೀಡುವುದನ್ನು ಆದಷ್ಟು ತಪ್ಪಿಸಬೇಕು, ಆಸ್ಪತ್ರೆಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಬ್ಲಾಕ್ ಫಂಗಸ್ ರೋಗವು ಸೋಂಕಿನ ರೋಗವಲ್ಲ ಜನರು ಇದರ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದ ಅವರು ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆಗೆ ಬರುವ ಜಿಲ್ಲೆಯ ಹಾಗೂ ಹೊರಜಿಲ್ಲೆಯಿಂದ ಬಂದವರ ಬಗ್ಗೆ ಪ್ರತೀ ದಿನದ ಮಾಹಿತಿಯನ್ನು ಎಲ್ಲಾ ಆಸ್ಪತ್ರೆಗಳು ನೋಡಲ್ ಅಧಿಕಾರಿಗಳಿಗೆ ನೀಡಬೇಕು ಎಂದರು.

ಕೋರೋನ ಸೋಂಕು ದೃಢ ಹೊಂದಿದ ಯಾವುದೇ ರೋಗ ಲಕ್ಷಣ ಇಲ್ಲದೇ ಮನೆಯಲ್ಲಿಯೇ ಇದ್ದು ರೋಗ ಉಲ್ಬಣಗೊಂಡು ಕೊನೆಯ ಕ್ಷಣಗಳಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಇಂತಹಾ ಪ್ರಕರಣಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದುವ ಪ್ರಕರಣಗಳು ಕಂಡುಬರುತ್ತಿದೆ ಇದಕ್ಕೆ ಆಸ್ಪದ ನೀಡಬಾರದು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಸಾಮಾನ್ಯ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆಗೆ ಆಕ್ಸಿಜನ್‍ನ್ನು ಬಳಸುತ್ತಿದ್ದಾರೆ, ಈ ಬಗ್ಗೆ ಶಿಫಾರಸ್ಸು ಮಾಡಿದ ವೈದ್ಯರುಗಳು ಮಾಹಿತಿಯನ್ನು ನೀಡಿದ್ದಲ್ಲಿ ಅಂತವರಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರುಗಳ ಮರಣ ಹೊಂದುವ ಕಾರಣವನ್ನು ಕಂಡುಕೊಳ್ಳಲು ತಜ್ಞರ 5 ರಿಂದ 6 ಜನರ ತಂಡವು ಕೋವಿಡ್ ಚಿಕಿತ್ಸೆ ನೀಡುವುದರ ಜೊತೆಯಲ್ಲಿ ಮರಣ ಹೊಂದಿದವರ ಕುಟುಂಬವನ್ನು ಸಂಪರ್ಕಿಸಿ ರೋಗಿಯ ಬಗ್ಗೆ ಪ್ರಥಮ ಹಂತದಿಂದ ಮರಣ ಹೊಂದುವ ಕೊನೆಯ ಹಂತದ ವರೆಗೆ ನಡೆದ ಪ್ರತಿಯೊಂದು ಮಾಹಿತಿಯನ್ನು ಕ್ರೋಢೀಕರಿಸಿ ಮರಣ ಹೊಂದಿರುವ ಬಗ್ಗೆ ಕಾರಣವನ್ನು ಕಂಡುಕೊಂಡಾಗ ಜಿಲ್ಲೆಯಲ್ಲಿ ಇತರರಿಗೆ ಚಿಕಿತ್ಸೆಯನ್ನು ನೀಡಲು ಅನುಕೂಲವಾಗುತ್ತದೆ ಎಂದರು.

ಸಭೆಯಲ್ಲಿ ಶಾಸಕ ಭರತ್ ವೈ. ಶೆಟ್ಟಿ, ಜಿಲ್ಲಾ ಉಪವಿಭಾಗಾಧಿಕಾರಿ ಮಧನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರಾದ ಡಾ. ಸದಾಶಿವ ಶ್ಯಾನುಬೋಗ್, ಡಾ. ಅಶೋಕ್, ಡಾ. ಬಾಳಿಗಾ, ಡಾ. ಶರತ್, ಡಾ. ರಾಜೇಶ್ ಬಿ.ವಿ, ಮತ್ತಿತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.