ಕರಾವಳಿ

ಮಾಸ್ಕ್ ಧರಿಸಲು ನಿರಾಕರಣೆ : ಖ್ಯಾತ ವೈದ್ಯ ಡಾ. ಕಕ್ಕಿಲ್ಲಾಯರ ವಿರುದ್ಧ ಕೇಸು ದಾಖಲು – ಮಾಸ್ಕ್ ಧರಿಸಿಕೊಂಡು ಠಾಣೆಗೆ ಬಂದ ವೈದ್ಯರು

Pinterest LinkedIn Tumblr

ಮಂಗಳೂರು, ಮೇ.19 : ಸರಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳಲ್ಲಿ ಪ್ರಮುಖ ಅಂಶವಾದ ಮಾಸ್ಕ್ ಧರಿಸದೆ ನಗರದ ಸೂಪರ್ ಮಾರ್ಕೆಟ್‌ನೊಳಗೆ ತೆರಳಿ ಅಲ್ಲಿಯ ಸಿಬ್ಬಂದಿ ಮಾಸ್ಕ್ ಧರಿಸಲು ಹೇಳಿದಾಗ ನಿರಾಕರಿಸಿ ವಾಗ್ವಾದ ನಡೆಸಿದ ಕಾರಣಕ್ಕೆ ನಗರದ ಖ್ಯಾತ ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ನಗರದ ಖ್ಯಾತ ವೈದ್ಯ, ಕೊರೊನಾ ಬಗ್ಗೆ ನಿಖರ ಹಾಗೂ ಸ್ಪಷ್ಟವಾಗಿ ವಿಶ್ಲೇಷಿಸಬಲ್ಲ ವೈರಲಾಜಿಸ್ಟ್ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ವಿರುದ್ಧ ನಗರದ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಕದ್ರಿಯ ಜಿಮ್ಮಿ ಸೂಪರ್ ಮಾರ್ಕೆಟ್‌ಗೆ ತೆರಳಿದ್ದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾಸ್ಕ್ ಧರಿಸಿರಲಿಲ್ಲ. ಮಾತ್ರವಲ್ಲದೇ ಮಾಸ್ಕ್ ಧರಿಸಿ ಒಳ ಬರುವಂತೆ ಮಾರ್ಕೇಟ್ ಸಿಬ್ಬಂದಿಗಳು ತಿಳಿಸಿದಾಗ ತಾನು ಮಾಸ್ಕ್ ಧರಿಸುವುದಿಲ್ಲ ಎಂದು ವಾಗ್ವಾದಕ್ಕೆ ಇಳಿದಿದ್ದರು ಎಂದು ಕದ್ರಿಯ ಜಿಮ್ಮಿ ಸೂಪರ್ ಮಾರ್ಕೆಟ್ ಪಾಲುದಾರ ರೇನ್ ರೊಸಾರಿಯೋ ಕದ್ರಿ ಠಾಣೆಗೆ ದೂರು ನೀಡಿದ್ದರು.

ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ಸರಕಾರ ಮಾರ್ಗಸೂಚಿಯನ್ನು ಡಾ. ಕಕ್ಕಿಲ್ಲಾಯ ಅವರು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಮಾಸ್ಕ್ ಧರಿಸಿ ಠಾಣೆಗೆ ಹಾಜಾರಾದ ಡಾ. ಕಕ್ಕಿಲ್ಲಾಯ :

ಮಾಸ್ಕ್ ಧರಿಸದೆ ಸರಕಾರ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಡಾ. ಕಕ್ಕಿಲ್ಲಾಯ ಅವರಿಗೆ ವಿಚಾರಣೆಗೆ ಹಾಜಾರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾಸ್ಕ್ ಧರಿಸಿಕೊಂಡು ಕದ್ರಿ ಠಾಣೆಗೆ ಹಾಜಾರಾಗಿದ್ದಾರೆ.

Comments are closed.