ಕರಾವಳಿ

ಕ್ರೆಡೈ ಸಂಸ್ಥೆಯ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ ಆಂಬ್ಯುಲೆನ್ಸ ಕೊಡುಗೆ

Pinterest LinkedIn Tumblr

ಮಂಗಳೂರು :ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರ ಮನವಿಯ ಮೇರೆಗೆ ಕ್ರೆಡೈ ಸಂಸ್ಥೆಯ ವತಿಯಿಂದ ನೀಡುವ ಆಂಬ್ಯುಲೆನ್ಸನ್ನು ಶಾಸಕರಿಗೆ ಕ್ರೆಡೈ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಅವರು ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕ್ರೆಡೈ ಸಂಸ್ಥೆಯು ವಾರ್ ರೂಂ ತೆರೆದು ಜನರ ಸೇವೆಯಲ್ಲಿ ತೊಡಗಿಸಿರುವುದು ಶ್ಲಾಘನೀಯ ಕಾರ್ಯ.

ಅಭಿವೃದ್ಧಿಯ ನಿಟ್ಟಿನಲ್ಲಿ ವಿಶೇಷ ಕೊಡುಗೆ ನೀಡಿರುವ ಕ್ರೆಡೈ ಸಂಸ್ಥೆಯು ಸಂಕಷ್ಟದ ಪರಿಸ್ಥಿತಿಯಲ್ಲೂ ಕೂಡ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆ. ನನ್ನ ಮನವಿಯ ಮೇರೆಗೆ ನೀಡಿರುವ ಈ ಆಂಬ್ಯುಲೆನ್ಸ್ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಸೇವೆಗೆ ನೀಡಲಾಗುವುದು ಎಂದರು.

ಬಳಿಕ ಮಾತನಾಡಿದ ಕ್ರೆಡೈ ಅಧ್ಯಕ್ಷರಾದ ಪುಷ್ಪರಾಜ್ ಜೈನ್, ಕೋವಿಡ್ ಸೋಂಕಿತರ ಸೇವೆಗಾಗಿ ಕ್ರೆಡೈ ಸಂಸ್ಥೆಯ ಕೋವಿಡ್ ವಾರ್ ರೂಂ ಮೂಲಕ ಸೇವೆ ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅವರ ವಿಶೇಷ ಮನವಿಯ ಮೇರೆಗೆ ಒಂದು ಆಂಬ್ಯುಲೆನ್ಸ್ ವಾಹನವನ್ನು ಶಾಸಕರಿಗೆ ಹಸ್ತಾಂತರಿಸಿದ್ದೇವೆ.

ಕ್ರೆಡೈ, ಕೆನರಾ ಚೇಂಬರ್ಸ್, ಕಾಂಟ್ರಾಕ್ಟರ್ ಅಸೋಸಿಯೇಷನ್, ಎಂಜಿನಿಯರ್ಸ್ ಅಸೋಸಿಯೇಷನ್ ಮೂಲಕ ಸದ್ಯ ಲೇಡಿಗೋಷನ್ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಜನರ ಸೇವೆಗೆ ಅವಕಾಶ ಮಾಡಿಕೊಟ್ಟ ಶಾಸಕರಿಗೆ, ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ಕ್ರೆಡೈ ಸಂಸ್ಥೆಯು ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದರು.

ಈ‌ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಮೀನುಗಾರಿಕಾ ನಿಗಮದ‌ ಅಧ್ಯಕ್ಷರಾದ ನಿತಿನ್ ಕುಮಾರ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡರಾದ ಸಂಜಯ್ ಪ್ರಭು, ಕ್ರೆಡೈ ಕಾರ್ಯದರ್ಶಿ ಪ್ರಶಾಂತ್ ಸನಿಲ್, ನವೀನ್ ಕರ್ಡೋಜಾ, ವಿನೋದ್ ಪಿಂಟೋ, ಗುರುಮೂರ್ತಿ ರಾವ್, ಜಿತೇಂದ್ರ ಕೊಟ್ಟಾರಿ ಮತ್ತಿತ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.