ಕರಾವಳಿ

ಕರಾವಳಿ ಜಿಲ್ಲೆಯ ಪಡಿತರದಲ್ಲಿ ಕೆಂಪು ಕುಚಲಕ್ಕಿ ವಿತರಣೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಮಂಗಳೂರು, ಮೇ 19 : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸರ್ಕಾರ ಪ್ರಸ್ತುತ ಸರಬರಾಜು ಮಾಡುತ್ತಿರುವ ಕುಚಲಕ್ಕಿಯು ಸಾಂಪ್ರದಾಯಕವಾಗಿ ಕೆಂಪು ಕುಚ್ಚಲಕ್ಕಿ ಊಟ ಮಾಡುವವರೆಗೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಪಡಿತರದಲ್ಲಿ ನೀಡುವ ಅಕ್ಕಿಯನ್ನು ಕೆಲವು ಕಾರ್ಡುದಾರರು ಪಡೆಯುತ್ತಿಲ್ಲ, ಕೆಲವರು ಕರಾವಳಿ ಜಿಲ್ಲೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುವ ಬಗ್ಗೆ ಕೇಳಿಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ಕೆಂಪು ಕುಚಲಕ್ಕಿ ವಿತರಿಸುವ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸ್ಥಳೀಯವಾಗಿ ವಿತರಿಸುವ ಕೆಂಪು ಕುಚ್ಚಲಕ್ಕಿಯನ್ನು ಸ್ಥಳೀಯ ಗಿರಣಿಗಳ ಮೂಲಕ ಸಂಸ್ಕರಿಸಿ ಪಡಿತರ ಅಂಗಡಿಗಳ ಮೂಲಕ ಗುಣಮಟ್ಟದ ಅಕ್ಕಿ ವಿತರಿಸಲು ಸರ್ಕಾರ ಅಗತ್ಯ ಯೋಜನೆ ರೂಪಿಸುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಪ್ರತಿ ತಿಂಗಳು 1 ಲಕ್ಷ ಕ್ವಿಂಟಲ್ ಕೆಂಪು ಕುಚಲಕ್ಕಿ ಅಗತ್ಯವಿದ್ದು, ಅವುಗಳ ಉತ್ಪಾದನೆಗೆ 16ರಿಂದ 18 ಲಕ್ಷ ಕ್ವಿಂಟಾಲ್ ಭತ್ತದ ಅವಶ್ಯಕತೆ ಇದೆ ಎಂದರು.

ಈಗಾಗಲೇ ಈ ಎರಡು ಜಿಲ್ಲೆಗಳಲ್ಲಿ ಎಂ.ಒ.ಫೋರ್, ಜಯ, ಜ್ಯೋತಿ, ಭದ್ರಕಜೆ, ಮುಂತಾದ ಕೆಂಪು ಕುಚಲಕ್ಕಿ ಉತ್ಪಾದನೆ ಮಾಡಬಹುದಾದ ಭತ್ತಗಳು ಬೆಳೆಯುತ್ತಿದೆ ಎಂದ ಅವರು ಅಗತ್ಯವಿದ್ದರೆ ಬೆಳಗಾವಿ, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ಮೈಸೂರು ಮುಂತಾದ ಜಿಲ್ಲೆಗಳಿಂದ ಗುಣಮಟ್ಟದ ಭತ್ತ ಖರೀದಿಸುವ ಪ್ರಸ್ತಾಪನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡಗಿ ಕರಾವಳಿ ಜಿಲ್ಲೆಗೆ ಕೆಂಪು ಕುಚಲಕ್ಕಿ ಗೆ ಸಂಬಂಧಪಟ್ಟಂತೆ ಭತ್ತಗಳ ಸಂಗ್ರಹಣೆ, ಸಂಸ್ಕರಣೆ ಹಾಗೂ ಸಂಬಂಧಿತ ಭತ್ತದ ತಳಿಗೆ ಸಬ್ಸಿಡಿ ನೀಡಲು ಕೇಂದ್ರ ಸರಕಾರದ ಅನುಮೋದನೆ ಪಡೆಯಲು ರಾಜ್ಯ ಆಹಾರ ನಿಗಮ ಪ್ರಯತ್ನ ಮಾಡಲಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಮಾತನಾಡಿ, ರೈತರು ಬೆಳೆದ ಕೆಂಪು ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಮಾಡಲು ಈವರೆಗೆ ಅವಕಾಶ ಇರಲಿಲ್ಲ ಎಂದ ಅವರು ಪ್ರಸ್ತುತ ಭಾರತದ ಆಹಾರ ನಿಗಮದಲ್ಲಿ ಕೆಂಪು ಭತ್ತಕ್ಕೆ ಕನಿಷ್ಟ ಬೆಲೆ ನೀಡಲು ಅನುಮತಿ ದೊರಕಿದೆ ಎಂದರು.

ಪ್ರಸ್ತುತ ಪಡಿತರದಲ್ಲಿ ಪ್ಯಾರಾ ಬಾಯಿಲ್ಡ್ ಅಕ್ಕಿ ದೊರಕುತ್ತಿದ್ದು, ಇನ್ನು ಮುಂದೆ ಕೆಂಪು ಕುಚಲಕ್ಕಿ ನೀಡಲು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಪ್ರಸ್ತುತ ಜಿಲ್ಲೆಗೆ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟçದಿಂದ ಕೆಂಪು ಕುಚಲಕ್ಕಿ ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕೆಂಪು ಕುಚಲಕ್ಕಿ ಅಗತ್ಯತೆ ಬಗ್ಗೆ ಸಚಿವರಿಗೆ ಮಾಹಿತಿ ಒದಗಿಸಿದರು ಅವರು ಶೀಘ್ರದಲ್ಲಿಯೇ ಜನಸಾಮಾನ್ಯರಿಗೆ ಕುಚಲಕ್ಕಿಯನ್ನು ಪಡಿತರ ವಿತರಣೆಯಲ್ಲಿ ಒದಗಿಸಬೇಕು ಎಂದರು.

ಸಭೆಯಲ್ಲಿ ಶಾಸಕರಾದ ಡಾ. ಭರತ್ ವೈ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯಕ್, ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ, ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕಿ ಪಿ.ಆರ್ ರಮ್ಯ, ವಿವಿಧ ಅಕ್ಕಿ ಗಿರಣಿಗಳ ಮಾಲೀಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.