ಕರಾವಳಿ

‘ತೌಕ್ತೆ’ ಚಂಡಮಾರುತ ಪ್ರಭಾವ : ಕರಾವಳಿಯಲ್ಲಿ ಭಾರೀ ಗಾಳೆ,ಮಳೆ – ಸಮುದ್ರ ಪ್ರಕ್ಷುಬ್ದ-ಅಲೆಗಳ ಅಬ್ಬರಕ್ಕೆ ಸ್ಥಳೀಯರು ತತ್ತರ

Pinterest LinkedIn Tumblr

ಮಂಗಳೂರು, ಮೇ 15: ‘ತೌಕ್ತೆ’ ಚಂಡಮಾರುತದ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಮೇ 20ರವರೆಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಚಂಡಮಾರುತದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲದೆ, ಒಳನಾಡಿನಲ್ಲೂ ಮುಂದಿನ ಐದು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೇ 16ರಂದು ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ.

ಅರಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಢಿರುವ ‘ತೌಕ್ತೇ’ ಚಂಡಮಾರುತದ ಪರಿಣಾಮವು ಪಶ್ಚಿಮ ಕರಾವಳಿ ತೀರದ ಮೇಲೆ ಆಗುತ್ತಿದೆ. ಕಳೆದ ಎರಡ್ಮೂರು ದಿನದ ಹಿಂದೆ ಕರಾವಳಿಯಲ್ಲಿ ಒಂದಷ್ಟು ಪರಿಣಾಮ ಬೀರಿದ್ದ ಈ ಚಂಡಮಾರುತವು ಶನಿವಾರ ಕೂಡ ಪೂರ್ಣ ಪ್ರಮಾಣದಲ್ಲಿ ತನ್ನ ಆರ್ಭಟ, ಶಕ್ತಿ ತೋರಿಸಿದೆ.

ಕರಾವಳಿಯಲ್ಲಿ ಚಂಡಮಾರುತದ ತೀವ್ರತೆ ಇರುವುದರಿಂದ ಗಂಟೆಗೆ 70 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಎತ್ತರದ ಅಲೆಗಳೂ ಏಳುತ್ತಿರುವುದರಿಂದ ಮೀನುಗಾರರು ಮುಂದಿನ ಐದೂ ದಿನ ಕಡಲಿಗೆ ಇಳಿಯಬಾರದು ಎಂದು ಹವಮಾನ ಇಲಾಖೆ ಎಚ್ಚರಿಸಿದೆ.

ಮಂಗಳೂರಿನಲ್ಲಿ ಶನಿವಾರ ಭಾರೀ ಗಾಳಿ, ಮಳೆಯಾಗುತ್ತಿದ್ದು, ಹಲವೆಡೆಗಳಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಚಂಡಾಮಾರುತಕ್ಕೆ ಉಳ್ಳಾಲ ಮತ್ತು ಸೋಮೇಶ್ವರ ಸಮುದ್ರ ತೀರ ಪ್ರಕ್ಷುಬ್ದಗೊಂಡಿದ್ದು, ಉಳ್ಳಾಲ ಭಾಗದಲ್ಲಿ 15 ಮತ್ತು ಸೋಮೇಶ್ವರದಲ್ಲಿ 50 ಮನೆಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ಹಿಂದೂ ರುದ್ರಭೂಮಿ ಸಂಪೂರ್ಣ ಸಮುದ್ರಪಾಲಾಗಿದೆ.

ಶನಿವಾರ ಬೆಳಿಗ್ಗೆನಿಂದ ಉಳ್ಳಾಲದಾದ್ಯಂತ ಭಾರೀ ಗಾಳಿ ಮಳೆ ಉಂಟಾಗಿತ್ತು. ಮಧ್ಯಾಹ್ನ 11ರ ನಂತರ ಸಮುದ್ರ ತೀರ ಪ್ರಕ್ಷುಬ್ದಗೊಂಡಿದ್ದು, ಹಲವು ತೆಂಗಿನಮರಗಳು, ಎರಡು ವಿದ್ಯುತ್ ತಂತಿಗಳು ನೆಲಕ್ಕುರುಳಿತು.

ಅಳಿವೆ ಬಾಗಿಲಿನಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಹೂಳು ತೆಗೆಯಲು ಸಾಧ್ಯವಾಗದೆ ಕುದ್ರು ಪ್ರದೇಶದಲ್ಲಿ 40 ಮನೆಗಳು ಜಲಾವೃತಗೊಂಡಿದ್ದು, ಅವರೆಲ್ಲರನ್ನು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ದೋಣಿ ಮೂಲಕ ಸ್ಥಳೀಯರು ಹಾಗೂ ಸೋಮೇಶ್ವರ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಾಂತರಿಸುವಲ್ಲಿ ಕೈಜೋಡಿಸಿದರು.

ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ತೀರ ಪ್ರದೇಶದಲ್ಲಿ ಅಲೆಗಳ ಅಬ್ಬರವೂ ಬಿರುಸು ಪಡೆದಿದೆ. ಉಳ್ಳಾಲ, ಸೋಮೇಶ್ವರ, ಪಣಂಬೂರು, ಮೀನಕಳಿಯ ಮತ್ತಿತರ ತೀರದಲ್ಲಿ ಕಡಲು ಪ್ರಕ್ಷುಬ್ಧವಾಗಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಇನ್ನು ಸೋಮೇಶ್ವರದ ಹಿಂದೂ ರುದ್ರಭೂಮಿಗೆ ಶುಕ್ರವಾರದಂದೇ ಬಿರುಸುಗೊಂಡಿದ್ದ ಸಮುದ್ರದ ಅಲೆಗಳು ಬಡಿದು ತಡೆಗೋಡೆ ಸಮುದ್ರಪಾಲಾಗಿತ್ತು. ಶನಿವಾರ ಮಧ್ಯಾಹ್ನ ವೇಳೆಗೆ ಹಿಂದೂ ರುದ್ರಭೂಮಿ ಸಂಪೂರ್ಣ ಸಮುದ್ರಪಾಲಾಗಿದೆ. ಸೋಮೇಶ್ವರ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯಿಂದಾಗಿ ಹಿಂದೂ ರುದ್ರಭೂಮಿ ಸಂಪೂರ್ಣ ಸಮುದ್ರಪಾಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶುಕ್ರವಾರ ವಾಯುಭಾರ ಕುಸಿತವಾಗಿದ್ದು, ಇದೀಗ ಈ ಚಂಡಮಾರುತವು ಲಕ್ಷ ದ್ವೀಪವನ್ನು ಕೇಂದ್ರೀಕರಿಸಿದೆ. ಮಧ್ಯಾಹ್ನ ವೇಳೆಗೆ ಕೇರಳದ ಕಣ್ಣೂರಿನಿಂದ 360 ಕಿ.ಮೀ. ಪಶ್ಚಿಮ ಮತ್ತು ನೈರುತ್ಯ ಭಾಗದಲ್ಲಿ ಚಂಡಮಾರುತ ತನ್ನ ಚಲನೆ ಮುಂದುವರಿಸಿದೆ.

ಗಂಟೆಗೆ 90-100 ಕಿ.ಮೀ.ವೇಗದಲ್ಲಿ ಉತ್ತರ ದಿಕ್ಕಿನತ್ತ ಸಂಚರಿಸಲಿರುವ ಈ ಚಂಡಮಾರುತ ಮೇ 18ರ ವೇಳೆಗೆ ಗುಜರಾತ್ ತೀರಕ್ಕೆ ತಲುಪುವ ಸಾಧ್ಯತೆ ಇದೆ. ಇನ್ನೂ ಎರಡ್ಮೂರು ದಿನ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ‘ತೌಕ್ತೇ’ ಚಂಡಮಾರುತವು ಪರಿಣಾಮ ಬೀರಲಿದ್ದು, ಗುಡುಗು, ಮಿಂಚು ಸಹಿತ ಭಾರಿ ಗಾಳಿ ಮಳೆಯಾಗಲಿದೆ ಎಮದು ಹವಾಮಾನ ಇಲಾಖೆ ತಿಳಿಸಿದೆ.

Comments are closed.