ಕರಾವಳಿ

ಕೋವಿಡ್ ಲಸಿಕಾ ಕೇಂದ್ರಗಳಿಗೆ ಶಾಸಕ ಕಾಮತ್ ದಿಢೀರ್ ಭೇಟಿ : ವ್ಯವಸ್ಥೆಗಳ ಪರಿಶೀಲನೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುವ ಕೋವಿಡ್ ಲಸಿಕಾ ಕೇಂದ್ರಗಳಿಗೆ ಶಾಸಕ ವೇದವ್ಯಾಸ್ ಕಾಮತ್ ದಿಢೀರ್ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಹಂತದ ಲಸಿಕೆ ವಿತರಣೆ ನಡೆಯುತ್ತಿದೆ. ವ್ಯವಸ್ಥೆಯ ಪರಿಶೀಲನೆಯ ದೃಷ್ಟಿಯಿಂದ ಭೇಟಿ ನೀಡಲಾಗಿದೆ. ಲೇಡಿಹಿಲ್, ಬಿಜೈ, ಪಡೀಲ್, ಶಕ್ತಿನಗರ, ಎಕ್ಕೂರು, ಬಂದರ್, ಜೆಪ್ಪು, ಬೆಂಗರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಳೆ ಬಂದರೂ ಸಮಸ್ಯೆ ಉಂಟಾಗದಂತೆ ತಗಡಿನ ಚಪ್ಪರ, ಲಸಿಕೆ ಪಡೆಯಲು ಬರುವವರಿಗೆ ಕುಳಿತುಕೊಳ್ಳಲು ಕುರ್ಚಿ, ಕುಡಿಯುವ ನೀರು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ವ್ಯವಸ್ಥೆ ಮಾಡಲು ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ತಿಳಿಸಿದ್ದೇನೆ ಎಂದರು.

ಲೇಡಿಹಿಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಸರದಲ್ಲಿ ಸ್ಥಳಾವಕಾಶದ ಕೊರತೆಯಿರುವ ಕಾರಣ ಮುಂದಿನ ಲಸಿಕೆ ವಿತರಣೆಯನ್ನು ಗಾಂಧಿನಗರ ಶಾಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕಾ ಕೇಂದ್ರವು ಕಾಪಿಕಾಡ್ ಶಾಲೆಯಲ್ಲಿ ಈಗಾಗಲೇ ನಡೆಯುತ್ತಿದೆ. ಲಸಿಕೆ ಪಡೆಯಲು ಬರುವ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದಂತೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಲಸಿಕಾ ಕೇಂದ್ರಗಳಿಗೆ ನೇಮಿಸಲಾಗಿದೆ. ಲಸಿಕಾ ಕೇಂದ್ರದಲ್ಲಿ ಜನಸಂದಣಿ ಉಂಟಾಗದಂತೆ ಎಚ್ಚರಿಕೆ ವಹಿಸಲು ಟೋಕನ್ ವ್ಯವಸ್ಥೆಯನ್ನು ಕೂಡ‌ ಸಮರ್ಪಕವಾಗಿ ಮಾಡಲಾಗಿದೆ. ಮಂಗಳೂರು ನಗರ ದಕ್ಷಿಣದ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲೂ ಈ ವ್ಯವಸ್ಥೆಗಳನ್ನು ಕೂಡಲೇ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ‌ ಕಾಮತ್ ತಿಳಿಸಿದ್ದಾರೆ.

Comments are closed.