ಕರಾವಳಿ

ಬಹರೈನ್ ಆಕ್ಸಿಜನ್ ವಿಚಾರದಲ್ಲಿ ರಾಜಕೀಯ : ಕಾಂಗ್ರೆಸ್ ನಾಯಕರಿಗೆ ಶಾಸಕ ಕಾಮಾತ್ ತಿರುಗೇಟು

Pinterest LinkedIn Tumblr

ಮಂಗಳೂರು: ಬಹರೈನ್ ದೇಶದಿಂದ ಮಂಗಳೂರಿಗೆ ಆಕ್ಸಿಜನ್ ಬಂದಿರುವ ವಿಚಾರದಲ್ಲಿ ರಾಜಕೀಯ ಹೇಳಿಕೆ ನೀಡುತ್ತಿರುವ ಕಾಂಗ್ರೆ ಸ್ ಮುಖಂಡರಿಗೆ ಶಾಸಕ ವೇದವ್ಯಾಸ ಕಾಮತ್ ಖಡಕ್ ತಿರುಗೇಟು ನೀಡಿದ್ದಾರೆ.

ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ಹೆಚ್ಚಿನ ಪ್ರಾಣಹಾನಿ ಮಾಡುವ ಮೊದಲೇ ಮುಂಜಾಗ್ರತಾ ಕ್ರಮವಾಗಿ ಭಾರತ ಸರಕಾರವು ಬಹರೈನ್ ದೇಶಕ್ಕೆ ಆಕ್ಸಿಜನ್ ಕಳುಹಿಸಿಕೊಡುವಂತೆ ಮನವಿ ಸಲ್ಲಿಸಿದೆ.

ಒಂದಷ್ಟು ರಾಜತಾಂತ್ರಿಕ ಬದಲಾವಣೆಗಳ ಕಾರಣ ಕೇಂದ್ರ ಸರಕಾರವು ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಆಕ್ಸಿಜನ್ ಪಡೆಯಲು ನಿರ್ಧರಿಸಿತ್ತು. ಹಾಗಾಗಿ ಮುಂಬೈ ಬಂದರಿಗೆ ನೇರವಾಗಿ ಬಹರೈನ್ ನಿಂದ ಆಕ್ಸಿಜನ್ ತರುವ ಪ್ರಕ್ರಿಯೆ ನಡೆದಿತ್ತು.

ಆದರೆ ಕರ್ನಾಟಕ ಸರಕಾರದ ಬೇಡಿಕೆಯ ಪ್ರಕಾರ ಕೇಂದ್ರ ಸರಕಾರವು ಮುಂಬೈ ಬದಲಿಗೆ ಮಂಗಳೂರು ಬಂದರಿಗೆ ಆಕ್ಸಿಜನ್ ಕಳುಹಿಸಲು ಕೇಳಿಕೊಂಡಿದೆ.

ಮಂಗಳೂರು ನವ ಬಂದರಿಗೆ ಐ.ಎನ್.ಎಸ್ ತಲ್ವಾರ್ ಹಡಗಿನಲ್ಲಿ ಬಂದಿಳಿದ ಆಕ್ಸಿಜನ್ ಕಂಟೈನರ್ ಗಳನ್ನು ಕಾನೂನು ಪ್ರಕ್ರಿಯೆಗಳ ಅನ್ವಯ ರೆಡ್ ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಿದ ಬಳಿಕ ಐ.ಒ.ಸಿ (ಇಂಡಿಯನ್ ಆಯಿಲ್ ಕಾರ್ಪೊರೇಶನ್) ಮೂಲಕ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಿ ಅಲ್ಲಿಂದ ವಿವಿಧ ಕಡೆಗಳಿಗೆ ವಿತರಿಸುವ ಕಾರ್ಯ ಆಗಿದೆ. ಇವೆಲ್ಲವೂ ಸರಕಾರಗಳ ನಡುವಿನ ಒಪ್ಪಂದದ ಪ್ರಕಾರ ನಡೆದಿರುವ ಪ್ರಕ್ರಿಯೆಯಾಗಿದೆ ಎಂದು ಕಾಮತ್ ಹೇಳಿದ್ದಾರೆ.

ಸಾರ್ವಜನಿಕವಾಗಿ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು ಮೊದಲು ವಿಚಾರವನ್ನು ಅರ್ಥಮಾಡಿ ಕೊಳ್ಳಬೇಕು. ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾಗಿ ರಾಷ್ಟ್ರಪತಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವರ ಪರಿಧಿಯೊಳಗೆ ಬರುತ್ತದೆ.

ರಾಜ್ಯಕ್ಕೆ ರಾಜ್ಯಪಾಲರು ಪ್ರಮುಖರಾದರೆ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳಿಗೂ ಜವಬ್ದಾರಿಯಿರುತ್ತದೆ. ಹಾಗಿರುವಾಗ ಸರಕಾರ ತರಿಸಿಕೊಂಡ ಆಕ್ಸಿಜನ್ ಕಂಟೈನರ್ ಗಳನ್ನು ಸ್ವಾಗತಿಸಿದರಲ್ಲಿ, ಪ್ರಧಾನಿಯವರನ್ನು ಅಭಿನಂದಿಸುವುದರಲ್ಲಿ ತಪ್ಪೇನಿದೆ.

ಪ್ರತಿಯೊಂದರಲ್ಲೂ ರಾಜಕೀಯ ಮಾಡುವ ಕಾಂಗ್ರೇಸಿಗರು ತಮ್ಮ ಬುದ್ಧಿವಂತಿಕೆಯನ್ನು ಒಳ್ಳೆಯ ಕಾರ್ಯಕ್ಕಾಗಿ ವಿನಿಯೋಗಿಸಿ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜಕೀಯ ಬೀದಿ ನಾಟಕಗಳ ಅಗತ್ಯವಿಲ್ಲ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

Comments are closed.