ಕರ್ನಾಟಕ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಕೊರೋನಾ ಕಂಟಕ: ಕಲರ್ಸ್ ಕನ್ನಡದ ಪರಮೇಶ್ವರ್​ ಗುಂಡ್ಕಲ್​ ಹೇಳಿಕೆಯೇನು?

Pinterest LinkedIn Tumblr

ಬೆಂಗಳೂರು: ಕೊರೊನಾ ನಡುವೆಯೂ ಬಿಗ್​ ಬಾಸ್​ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಕಳೆದ 2 ವಾರದಿಂದ ಶೋ ನಡೆಸಿಕೊಡುತ್ತಿದ್ದ ಸುದೀಪ್​ಗೆ ಅನಾರೋಗ್ಯವಿದ್ದ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ವಾರದ ಕಾರ್ಯಕ್ರಮ ನಡೆದಿದೆ. ಮಾತ್ರವಲ್ಲದೆ ಎಲಿಮಿನೇಟ್​ ಪ್ರಕ್ರಿಯೆ ಕೂಡ ಆಗಿದೆ. ಸದ್ಯ ಈ ಕಾರ್ಯಕ್ರಮ ಕೊರೋನಾದಿಂದಾಗಿದೆ ರದ್ದಾಗಿದೆ. ಈ ಬಗ್ಗೆ ಕಲರ್ಸ್​ ಕನ್ನಡದ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಹೇಳಿಕೊಂಡಿದ್ದಾರೆ.

”ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್‍ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.

ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ.

ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ.

ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ” ಎಂದಿದ್ದಾರೆ.

Comments are closed.