ಕರಾವಳಿ

ಅಪಘಾತ ತಪ್ಪಿಸಲು ಹೋಗಿ ಅಪಘಾತ : ಢಿಕ್ಕಿ ಹೊಡೆದು ಎತ್ತರಕ್ಕೆ ಹಾರಿ ಕೆಳಗೆ ಬಿದ್ದು ಬೈಕ್ ಸವಾರ ಮೃತ್ಯು

Pinterest LinkedIn Tumblr

ಮಂಗಳೂರು, ಮೇ 07 : ನಗರದ ಯೆಯ್ಯಾಡಿ ಸಮೀಪದ ಪದವಿನಂಗಡಿ ಬಳಿ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸಾವು ಬದುಕಿನೊಂದಿಗೆ ಹೊರಾಡಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

ಪದವಿನಂಗಡಿ ಸಮೀಪ ರಸ್ತೆ ಮಧ್ಯೆ ಅಡ್ಡ ಬಂದ ಸ್ಕೂಟರನ್ನು ತಪ್ಪಿಸಲು ಹೋಗಿ ಕೆಟಿಎಂ ಬೈಕ್ ಸವಾರ ರಸ್ತೆ ಬದ್ದಿಯ ಅಂಗಡಿಯ ಜಗುಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದು ಗಂಭೀರ ಗಾಯಗೊಂಡಿದ್ದರು.

ಯುವಕನನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಾಲಿಸಲಾಗಿದೆ, ಆದರೆ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಯುವಕನನ್ನು ಯೆಯ್ಯಾಡಿ ಸಮೀಪದ ಶರಭತ್ ಕಟ್ಟೆ ಬಳಿ ನಿವಾಸಿ ಪ್ರಶಾಂತ್ (30) ಎಂದು ಗುರುತಿಸಲಾಗಿದೆ. ಇವರು ನೀರುಮಾರ್ಗದ ಚೇತನಾ ಎಂಟರ್‌ಪ್ರೈಸಸ್‌ನಲ್ಲಿ ಸುಪರ್ ವೈಸರ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಪ್ರಶಾಂತ್ ತನ್ನ ಬೈಕಿನಲ್ಲಿ ಬೋಂದೆಲ್ ನಿಂದ ಕೆಪಿಟಿ ಕಡೆಗೆ ಬರುತ್ತಿದ್ದಾಗ ಪದವಿನಂಗಡಿ ಬಳಿ ಸ್ಕೂಟರ್ ಸವಾರನೊಬ್ಬ ರಸ್ತೆ ಕ್ರಾಸ್ ಮಾಡಲು ಯತ್ನಿಸಿದ್ದು, ಈ ವೇಳೆ ಆತ ರಸ್ತೆ ಕ್ರಾಸ್ ಮಾಡದೇ ರಸ್ತೆ ಮಧ್ಯೆಯೇ ನಿಂತ ಕಾರಣ ಬೇಗವಾಗಿ ಬರುತ್ತಿದ್ದ ಪ್ರಶಾಂತ್ ಈತನ ಸ್ಕೂಟರ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದ್ದಾರೆ.

ಆದರೆ ಈ ವೇಳೆ ಪ್ರಶಾಂತ್ ಬೈಕ್ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿದ್ದ ಅಂಗಡಿಗೆ ಢಿಕ್ಕಿ ಹೊಡೆದಿದ್ದಾರೆ. ಈ ವೇಳೆ ಪ್ರಶಾಂತ್ ಎತ್ತರಕ್ಕೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಮಾತ್ರವಲ್ಲದೇ ಢಿಕ್ಕಿಯ ರಭಸಕ್ಕೆ ಈತನ ಬೈಕ್ ಕೂಡ ಮೇಲೆ ಹಾರಿ ಹಿಂಬದಿಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ. ಈ ಎಲ್ಲಾ ಭೀಕರ ರಸ್ತೆ ಅಪಘಾತ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಮಧ್ಯೆ ನಿಂತ ಸ್ಕೂಟರ್ ಸವಾರನ ಮೇಲೆ ಕೇಸು ದಾಖಲು:

ರಸ್ತೆ ದಾಟಲು ಬಂದ ವ್ಯಕ್ತಿಯೋರ್ವ ರಸ್ತೆ ದಾಟದೇ ತನ್ನ ಸ್ಕೂಟರ್ ನಲ್ಲಿ ಕುಳಿತು ರಸ್ತೆ ಮಧ್ಯೆಯೇ ನಿಂತು ಅಪಘಾತಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಬೇಜಾವಾಬ್ದಾರಿಯಾಗಿ ವರ್ತಿಸಿದ ಸ್ಕೂಟರ್ ಸವಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.