ಕರಾವಳಿ

ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವವನ್ನು ಕೆಲವೇ ಕ್ಷಣಗಳಲ್ಲಿ ವಿಲೇವಾರಿ ಮಾಡಲು ಶಾಸಕ ಕಾಮಾತ್ ಸೂಚನೆ

Pinterest LinkedIn Tumblr

ಮಂಗಳೂರು : ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ವ್ಯವಸ್ಥೆಯ ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಶಾಸಕ ಕಾಮತ್ ಅವರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಯ ವರದಿ ತಡವಾಗುತ್ತಿರುವ ಕುರಿತು ಮಾಹಿತಿ ಪಡೆದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕೋವಿಡ್ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಹಾಗಾಗಿ ಪರೀಕ್ಷಾ ವರದಿ ತಡವಾಗುತ್ತಿದೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ ಸರಕಾರ ನೀಡಿರುವ ಎರಡು ಟೆಸ್ಟಿಂಗ್ ಮೆಶಿನ್ ಗಳನ್ನು ಅಳವಡಿಸಲಾಗಿದೆ. ಅದನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಒಂದೇ ದಿನದಲ್ಲಿ ಪರೀಕ್ಷಾ ವರದಿಯನ್ನು ನೀಡುವಂತೆ ಸೂಚಿಸಿದ್ದೇನೆ.

ಆಸ್ಪತ್ರೆಯಲ್ಲಿ ದಾಖಲಾಗುವ ಕೋವಿಡ್ ಸೋಂಕಿತರ ಆರೋಗ್ಯದ ಕುರಿತು ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲು ಆಸ್ಪತ್ರೆಯಲ್ಲಿ ಸಹಾಯ ಕೇಂದ್ರ ತೆರೆದು ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಾಗದಂತೆ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದ್ದೇನೆ

ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ವಿಲೇವಾರಿ ಯಾವುದೇ ಕಾರಣಕ್ಕೂ ತಡವಾಗಬಾರದು. ಮೃತಪಟ್ಟ ಕೆಲವೇ ಕ್ಷಣಗಳಲ್ಲಿ ಮೃತ ರೋಗಿಯ ಶವ ವಿಲೇವಾರಿ ಮಾಡಬೇಕು.

ಶವ ಸಂಸ್ಕಾರಕ್ಕೆ ಸಂಬಂಧಪಟ್ಟವರು ಮುಂದಾಗದಿದ್ದರೆ ಶವ ಸಂಸ್ಕಾರಕ್ಕೆ ಸ್ವಯಂ ಸೇವಕರ ತಂಡವನ್ನು ರಚಿಸಿ ಅಂತರಕ್ರಿಯೆ ನಡೆಸಲಾಗುತ್ತದೆ. ಸ್ವಯಂ ಸೇವಕರಿಗೆ ಬೇಕಾದ ಪೂರ್ಣ ಪ್ರಮಾಣದ ಪಿಪಿಇ ಕಿಟ್ ಒದಗಿಸುವ ಕುರಿತು ಅಧಿಕಾರಿಗಳಿಗೆ ಶಾಸಕ ಕಾಮತ್ ಸೂಚಿಸಿದರು.

ಕೋವಿಡ್ ಪರೀಕ್ಷಾ ವರದಿ ತಡವಾಗುವ‌ ವೇಳೆ ಪರೀಕ್ಷೆಗೆ ಒಳಪಡುವ ವ್ಯಕ್ತಿ ಸಾರ್ವಜನಿಕವಾಗಿ ತಿರುಗಾಡದಂತೆ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ವರದಿ ಬರುವ ವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಬೇಕು ಎಂದರು.

ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ವಹಿಸುವ ಕುರಿತು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಿಗೆ ಶಾಸಕ ಕಾಮತ್ ಸೂಚಿಸಿದರು.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಮಾಜಿ ಕಾರ್ಪೋರೇಟರ್ ಹಾಗೂ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಸದಾಶಿವ‌ ಶಾನುಭೋಗ್,ಸ್ಥಾನೀಯ ವೈದ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ ಸುಜಯ್ ಭಂಡಾರಿ, ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ರಮಾಕಾಂತ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.