ಕರಾವಳಿ

ದ.ಕ.ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲು 78ಕ್ಕೂ ಹೆಚ್ಚು ವೈದ್ಯಕೀಯ ತಂಡ ರಚನೆ

Pinterest LinkedIn Tumblr

ಮಂಗಳೂರು, ಮೇ 06 : ಕೋವಿಡ್ ಸೋಂಕು ಧೃಡಪಟ್ಟಿರುವ ರೋಗಿಗಳಲ್ಲಿ ಶೇಕಡಾ 85.70 ಗೂ ಹೆಚ್ಚು ರೋಗಿಗಳು ಹೋಮ್ ಐಸೋಲೇಶನ್ ಚಿಕಿತ್ಸೆ ಪಡೆಯುತ್ತಿದ್ದು. ಇವರ ಆರೋಗ್ಯ ಕ್ಷೇಮಗಳನ್ನು ವಿಚಾರಿಸಲು ವೈದ್ಯಕೀಯ ತಂಡಗಳನ್ನು ರಚನೆ ಮಾಡುವುದರೊಂದಿಗೆ ಅವರುಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ವೈದ್ಯಕೀಯ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ 8,414 ಕೋವಿಡ್ ಸಕ್ರಿಯ ಪ್ರಕರಣಗಳಿದ್ದ್ದು ಅವುಗಳಲ್ಲಿ 1,204 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7,210 ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ರೋಗಿಗಳು ಶೇ.14.30 ರಷ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬಾಕಿ ಉಳಿದವರು ಹೋಮ್ ಐಸೋಲೇಷನ್ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಶೇ.75 ರಷ್ಟು ನಗರ ಪ್ರದೇಶದ ವ್ಯಾಪ್ತಿಯವರೇ ಇದ್ದಾರೆ, ಅವರುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಅವರ ಯೋಗಕ್ಷೇಮ ಪ್ರತಿದಿನ ವಿಚಾರಿಸಬೇಕು ಎಂದರು.

ಹೋಮ್ ಐಸೋಲೇಷನ್ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರನ್ನು ಒಳಗೊಂಡ 78 ಕ್ಕೂ ಹೆಚ್ಚು ತಂಡಗಳನ್ನು ರಚಿಸುವುದರೊಂದಿಗೆ ಅವರುಗಳು ಮನೆಮನೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಇವುಗಳ ಮೇಲ್ವಿಚಾರಣೆ ಮಾಡಲು ಸಹ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಲ್ಲಿ 45 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ದೊಳಗಿನ ರೋಗಿಗಳ ಮಾಹಿತಿ ಕಲೆ ಹಾಕುವುದರೊಂದಿಗೆ ಅವರುಗಳಲ್ಲಿ ರಕ್ತದೊತ್ತಡದಿಂದ ಬಳಲುವವರು, ಮಧುಮೇಹ ಸೇರಿದಂತೆ ಮತ್ತಿತರ ಕಾಯಿಲೆ ಹೊಂದಿರುವವರನ್ನು ಗುರುತಿಸುವುದರೊಂದಿಗೆ ಅವರುಗಳ ರಕ್ತ ಪರೀಕ್ಷೆ ಮತ್ತಿತರ ಪರೀಕ್ಷೆಗಳನ್ನು ಮಾಡುವುದರೊಂದಿಗೆ ಇನ್ನಿತರ ತೊಂದರೆಗಳಾದಲ್ಲಿ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.

ಜನರು ದಿನನಿತ್ಯದ ಅವಶ್ಯಕ ವಸ್ತುಗಳನ್ನು ಖರೀದಿಸಲು ಕೋವಿಡ್ ಕಫ್ರ್ಯೂನಲ್ಲಿ ಬೆಳಿಗ್ಗೆ 6 ರಿಂದ 10 ರವರೆಗೆ ಅವಕಾಶ ನೀಡಲಾಗಿದೆ. ಆದರೆ ಕೆಲವರು ಯಾವುದೇ ಅವಶ್ಯಕ ಕೆಲಸವಿಲ್ಲದಿರುವವರು ಅನಗತ್ಯವಾಗಿ ತಿರುಗಾಡುವುದು ಕಂಡುಬರುತ್ತದೆ. ಇದಕ್ಕೆ ಜನರು ಕಡಿವಾಣ ಹಾಕಬೇಕು ಎಂದರು.

ಖಾಸಗಿ ನರ್ಸಿಂಗ್ ಹೋಮ್ ಗಳಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರಿಂದ ಸರ್ಕಾರ ನಿಗದಿ ಪಡಿಸಿರುವ ದರವನ್ನು ಮಾತ್ರ ತೆಗೆದುಕೊಳ್ಳಬೇಕು ಆದರೆ ಕೆಲವರು ಹೆಚ್ಚು ಶುಲ್ಕ ಪಡೆಯುತ್ತಿರುವ ಬಗ್ಗೆ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಹೀಗಾಗದಂತೆ ನೋಡಿಕೊಳ್ಳಬೇಕು ಕೆಲವೊಮ್ಮೆ ಹೆಚ್ಚು ಪಡೆದದ್ದು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಗೆ ದೂರು ನೀಡಿದಲ್ಲಿ ಹೆಚ್ಚು ಶುಲ್ಕವನ್ನು ಮರು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರೆಮಿಡಿಸಿವಿಯರ್ ಔಷದಿ ಕೋವಿಡ್ ಸೋಂಕಿತರೆಲ್ಲರಿಗೂ ಅವಶ್ಯಕತೆ ಇರುವುದಿಲ್ಲ ಪ್ರಾರಂಭದ ಹಂತದಲ್ಲಿ ಉಸಿರಾಟದ ತೊಂದರೆ ಇರುವಂತವರಿಗೆ ನೀಡುವುದು ಎಂದು ದೇಶದ ವೈದ್ಯಕೀಯ ಸಂಸ್ಥೆಗಳು ತಿಳಿಸಿವೆ ಎಂದ ಅವರು ಅಗತ್ಯ ಇರುವ ರೋಗಿಗಳಿಗೆ ಮಾತ್ರ ಈ ಔಷದಿಯನ್ನು ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.

ಸಭೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಭರತ್ ವೈ. ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ದಿನೇಶ್, ಉಪವಿಭಾಗಾಧಿಕಾರಿ ಮಧನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರಾದ ಡಾ. ಸದಾಶಿವ ಶ್ಯಾನುಬೋಗ್, ಲೇಡಿಘೋಷನ್ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಡಾ. ದುರ್ಗಾ ಪ್ರಸಾದ್ ಎಂ.ಆರ್, ಡಾ. ಚಕ್ರಪಾಣಿ, ಡಾ. ಅಭಯ ನಿರ್ಗುಡೆ, ಡಾ. ಶ್ರೀಪಾದ ಜಿ. ಮಚಂದಳಿ, ಮತ್ತಿತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.