
ಮಂಗಳೂರು: ಯೋಗ ಪ್ರತಿಯೊಬ್ಬರಿಗೂ ಅಗತ್ಯವಾದ ವಿಚಾರ. ಯೋಗ ದೈಹಿಕ ಮಾತ್ರವಲ್ಲ ಮನಸ್ಸಿಗೂ ಅನ್ವಯಿಸುವ ಅಂಶ ಎಂದು ದ.ಕ.ಜಿ.ಪಂ ಸಿಇಒ ಡಾ.ಕುಮಾರ್ ಹೇಳಿದರು.
ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಪತ್ರಕರ್ತರಿಗೆ ಯೋಗ ಶಿಬಿರದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬದುಕಿನಲ್ಲಿ ದೇಹದ ಸ್ಥಿತಿಯನ್ನು ಉತ್ತಮವಾಗಿಡಲು ಜಿಮ್, ವಾಕಿಂಗ್ ಹೋಗುತ್ತೇವೆ ಆದರೆ ಮನಸ್ಸಿನ ಸ್ಥಿತಿ ಕೂಡ ಅಷ್ಟೇ ಮುಖ್ಯವಾಗಿದೆ. ದೇಹ ಹಾರ್ಡ್ ವೇರ್ ಆದರೆ ಮನಸ್ಸು ಸಾಪ್ಟ್ ವೇರ್ ಎರಡು ಕೂಡ ಉತ್ತಮವಾಗಿರಬೇಕು ಎಂದರು.
ಪತ್ರಿಕಾ ಮಾಧ್ಯಮ ಸಮಾಜವನ್ನು ಪರಿವರ್ತನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸಮಾಜದ ಆರೋಗ್ಯ ಉತ್ತಮವಾಗಿರಲು ಪತ್ರ ಕರ್ತ ಶ್ರಮಿಸುತ್ತಾನೆ. ಅದೇ ರೀತಿಯಲ್ಲಿ ಆತನ ಆರೋಗ್ಯಕ್ಕೆ ಯೋಗ ಅಗತ್ಯವಿದೆ ಎಂದರು.

ಈ ಸಂದರ್ಭ ಯೋಗ ಗುರು ಜಗದೀಶ್ ಶೆಟ್ಟಿ ಬಿಜೈ ಮಾತನಾಡಿ, ಯೋಗ ಎನ್ನುವುದು ನೆಮ್ಮದಿಗಾಗಿ ಮಾಡುವುದು. ಚಿಕ್ಕ ಮಕ್ಕಳನ್ನು ಸುಸಂಸ್ಕೃತ ರಾಗಿ ಮಾಡಲು, ರೋಗದಿಂದ ಪಾರಾಗಲು ಯೋಗ ಅಗತ್ಯ ಎಂದರು.
ಈ ಬಳಿಕ ಜಗದೀಶ್ ಶೆಟ್ಟಿ ಬಿಜೈ ಹಾಗೂ ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರನ್ನು ಸನ್ಮಾನಿಸಲಾಯಿತು.
ಯೋಗ ತರಬೇತಿಯಲ್ಲಿ ಭಾಗವಹಿಸಿದ ಎಸ್ ಡಿಎಂ ಬಿಸಿನೆಸ್ ಮ್ಯಾನೇಜ್ಮೆಂಟ್ ನ ನಿವೃತ್ತ ಪ್ರಿನ್ಸಿಪಾಲ್ ಡಾ. ದೇವರಾಜ್ ಮಾತನಾಡಿ, ಆರೋಗ್ಯ ಉತ್ತಮವಾಗಿರಲು ದಿನನಿತ್ಯ ಉತ್ಸಾಹದಿಂದ ಕೆಲಸ ಮಾಡಲು ಯೋಗದ ಅಗತ್ಯವಿದೆ ಎಂದರು.
ವೇದಿಕೆಯಲ್ಲಿಸುಧಾಕರ್ ಕಾಮತ್ ಉಪಸ್ಥಿತರಿದ್ದರು. ವಿಜಯ ಕರ್ನಾಟಕದ ಹಿರಿಯ ವರದಿಗಾರ ಆರ್ ಸಿ ಭಟ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯ ಭಾಸ್ಕರ ರೈ ಕಟ್ಟ ವಂದಿಸಿದರು.
Comments are closed.