ಕರಾವಳಿ

ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಜಲಚರಗಳ ಮಾರಣಹೋಮ; ಸ್ಥಳೀಯರಲ್ಲಿ ಆತಂಕ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸನಿಹದಲ್ಲಿ ಹರಿಯುವ ಪುಣ್ಯ ನದಿ ಸೌಪರ್ಣಿಕೆಯ ಒಡಲು ಖಾಲಿಯಾಗುತ್ತಿರುವುದರಿಂದಾಗಿ ಇಲ್ಲಿನ ಮೀನು ಹಾಗು ಜಲಚರಗಳು ಸತ್ತು ನದಿಯಲ್ಲಿ ತೇಲುತ್ತಿದೆ.

ಪ್ರತಿ ವರ್ಷದ ಎಪ್ರಿಲ್ ತಿಂಗಳಲ್ಲಿ ಸುಡುವ ಬಿಸಿಲ ಬೇಗೆಯಿಂದಾಗಿ ನದಿಯ ನೀರು ಖಾಲಿಯಾಗುವುದರಿಂದಾಗಿ ನೀರನ್ನೆ ನಂಬಿಕೊಂಡಿರುವ ಜಲಚರಗಳ ಜೀವಕ್ಕೆ ಕುತ್ತು ಬರುವುದು ಮಾಮೂಲಿಯಾಗಿದೆ. ಸೌಪರ್ಣಿಕೆ ನದಿಯ ನೀರಿನ ಮೇಲೆ, ನದಿಯ ದಂಡೆಯ ಸನಿಹ ಹಾಗೂ ನದಿಯ ಮೂಲೆ ಮೂಲೆಗಳಲ್ಲಿ ಜೀವ ಕಳೆದುಕೊಂಡು ತೇಲುತ್ತಿರುವ ಹೆಮ್ಮಾಲ, ಕರ್ಸೆ, ಕಲ್ಮೊಗ ಮುಂತಾದ ಜಾತಿಯ ರಾಶಿ ರಾಶಿ ಮೀನುಗಳ ಮಾರಣ ಹೋಮವನ್ನು ಕಾಣುತ್ತಿರುವ ಸ್ಥಳೀಯರು ಹಾಗೂ ಭಕ್ತರು ಕಣ್ಣೀರು ಸುರಿಸುತ್ತಿದ್ದಾರೆ. ಸತ್ತು ಬೀಳುತ್ತಿರುವ ಮೀನಿನಿಂದಾಗಿ ಪರಿಸರದಲ್ಲಿ ಗಬ್ಬು ವಾಸನೆ ಹರಡುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗ ಬರಬಹುದು ಎನ್ನುವ ಆತಂಕಗಳು ಸ್ಥಳೀಯರಲ್ಲಿ ಇದೆ.

ಅಮೂಲ್ಯವಾದ ಪ್ರಾಕೃತಿಕ ಗಿಡಮೂಲಿಕೆಗಳನ್ನು ಹೊಂದಿರುವ ಪಶ್ಚಿಮಘಟ್ಟದ ಕೊಡಚಾದ್ರಿ ಬೆಟ್ಟದಿಂದ ಇಳಿದು ಬಂದು ಸೌಪರ್ಣಿಕೆಯನ್ನು ಸೇರುತ್ತಿರುವ ನೀರು, 64ಪುಣ್ಯ ತೀರ್ಥಗಳ ಸಂಗಮ ಎನ್ನುವ ನಂಬಿಕೆ ಇದೆ. ಕೊಡಚಾದ್ರಿಯಲ್ಲಿನ ಗಿಡಮೂಲಿಕೆಗಳ ಸಾರದೊಂದಿಗೆ ಬರುವ ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ಗುಣವಾಗುತ್ತದೆ ಎನ್ನುವ ಅಚಲ ನಂಬಿಕೆ ಇರುವುದರಿಂದಾಗಿ ಕೊಲ್ಲೂರಿಗೆ ಬರುವ ಭಕ್ತರು ಅಗ್ನಿ ತೀರ್ಥ, ಕಾಶಿ ತೀರ್ಥ ಹಾಗೂ ಸೌಪರ್ಣಿಕೆಯ ಸ್ನಾನ ಘಟ್ಟಗಳಲ್ಲಿ ಪುಣ್ಯ ಸ್ನಾನವನ್ನು ಮಾಡುವುದು ರೂಢಿಯಾಗಿರಿಸಿಕೊಂಡಿದ್ದಾರೆ. ಬಿಸಿಲಿನ ತಾಪದಿಂದಾಗಿ ನದಿಯ ನೀರುಗಳು ಭತ್ತಿ ಖಾಲಿಯಾಗುತ್ತಿದ್ದು, ಸ್ನಾನ ಮಾಡಿದ ನೀರುಗಳು ಸುಗಮವಾಗಿ ಹರಿದು ಹೋಗದೆ ಗುಂಡಿಗಳಲ್ಲಿ ನಿಲ್ಲುತ್ತಿದೆ.

ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಹಾಗೂ ಸೌಪರ್ಣಿಕೆಯ ಸ್ನಾನ ಘಟ್ಟದ ಬಳಿಯಲ್ಲಿ ನೀರಿನ ಸಂಗ್ರಹಕ್ಕಾಗಿ ಡ್ಯಾಂ ನಿರ್ಮಾಣ ಮಾಡಿರುವುದರಿಂದಾಗಿ ಗುಂಡಿಯಲ್ಲಿ ಸಂಗ್ರಹವಾಗುವ ನೀರುಗಳಲ್ಲಿ ಸೇರಿಕೊಳ್ಳುವ ಮೀನುಗಳು, ಬಿಸಲಿನ ತಾಪದಿಂದ ಬಿಸಿಯಾಗುವ ನೀರಿನಲ್ಲಿ ಪ್ರಾಣ ಕಳೆದುಕೊಳ್ಳುತ್ತಿದೆ. ಸೌಪರ್ಣಿಕೆಯ ಒಡಲನ್ನು ಕಲುಷಿತಗೊಳಿಸುತ್ತಿರುವ ಘನ ಹಾಗೂ ದ್ರವ ತ್ಯಾಜ್ಯಗಳು ನೀರಿನೊಂದಿಗೆ ಸೇರಿ ರಾಸಾಯನಿಕ ಬದಲಾವಣೆಗಳನ್ನು ಕಂಡು ಮೀನುಗಳ ಮಾರಣ ಹೋಮಕ್ಕೆ ಪರೋಕ್ಷ ಕಾರಣವಾಗುತ್ತಿದೆ. ಬಾಯಾರಿಕೆ ಇಂಗಿಸಿಕೊಳ್ಳಲು ಸೌಪರ್ಣಿಕೆಯ ನದಿಗೆ ಬರುವ ಕಾಡು ಪ್ರಾಣಿಗಳಿಗೂ ಮಲೀನ ಹಾಗೂ ವಿಷಯುಕ್ತ ನೀರು ಅಪಾಯ ತಂದೊಡ್ಡುವ ಸಾಧ್ಯತೆ ಇದೆ.

Comments are closed.