ಕರಾವಳಿ

ಕಾಸರಗೋಡಿನ ಪ್ರಧಾನ ವ್ಯಾಪಾರ ಕೇಂದ್ರ(ಪೇಟೆ)ಗಳ ಪ್ರವೇಶಾತಿಗೆ ಕೋವಿಡ್ ನೆಗೆಟಿವ್/ ವಾಕ್ಸಿನೇಷನ್ ಸರ್ಟಿಫಿಕೆಟ್ ಹಾಜರಾತಿ ಕಡ್ಡಾಯ

Pinterest LinkedIn Tumblr

ಕಾಸರಗೋಡು : 14 ದಿನಗಳ ಅವಧಿಯಲ್ಲಿ ಕೋವಿಡ್ ತಪಾಸಣೆ ನಡೆಸಿ ಲಭಿಸಿರುವ ನೆಗೆಟಿವ್ ಸರ್ಟೀಪಿಕೆಟ್ ಯಾ ಎರಡು ಡೋಸ್ ವಾಕ್ಸಿನೇಷನ್ ನಡೆಸಿರುವ ಸರ್ಟಿಫೀಕೆಟ್ ಇರುವ ಮಂದಿಗೆ ಮಾತ್ರ ಜಿಲ್ಲೆಯ ಪ್ರಧಾನ ವ್ಯಾಪಾರ ಸಂಸ್ಥೆಗಳಾಗಿರುವ ಕಾಸರಗೋಡು, ಕಾಞಂಗಾಡು, ಉಪ್ಪಳ, ಕುಂಬಳೆ, ನೀಲೇಶ್ವರ, ಚೆರುವತ್ತೂರು ಪೇಟೆಗಳಿಗೆ (ವಾಣಿಜ್ಯ, ವ್ಯಾಪಾರ ಸಂಸ್ಥೆಗಳಿಗೆ) ಪ್ರವೇಶಾತಿ ಇರುವುದು ಎಂದು ಕಾಸರಗೋಡು ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರ ಸಭೆ ತೀರ್ಮಾನಿಸಿದೆ.

ಈ ಆದೇಶವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಗರದ ರಸ್ತೆಗಳ ಎರಡೂ ಬದಿಗಳಲ್ಲಿ ಪೊಲೀಸ್ ತಪಾಸಣೆ ಇರುವುದು. ಕೋವಿಡ್ ತಪಾಸಣೆ ಮತ್ತು ವಾಕ್ಸಿನೇಷನ್ ಸೌಲಭ್ಯವೂ ಈ ಚಟುಇವಟಿಕೆಗಳ ಜತೆಗೇ ಸಜ್ಜುಗೊಳಿಸಬೇಕಿದೆ. ಈ ರೀತಿ ನಿಯಂತ್ರಣಗಳಿರುವ ಪ್ರದೇಶಗಳಿಗೆ ತಲಾ ಒಬ್ಬ ಕಾರ್ಯಕಾರಿ ಮೆಜಿಸ್ಟ್ರೇಟರನ್ನು ನೇಮಿಸಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ಪೊಲೀಸ್ ತಪಾಸಣೆ ಚುರುಕುಗೊಳಿಸುವ ನಿಟ್ಟಿನಲ್ಲಿ ಶುಕ್ರವಾರದಿಂದಲೇ ವಿಶೇಷ ಡ್ರೈವ್ ನಡೆಸಲು ತೀರ್ಮಾನಿಸಲಾಗಿದ್ದು, ರಂಝಾನ್ ಉಪವಾಸ ವ್ರತ ಸಹಿತ ಉತ್ಸವಗಳಿಗೆ ಸಂಬಂಧಿಸಿ ಕಾರ್ಯಕ್ರಮಗಳಲ್ಲಿ ಕಟ್ಟುನಿಟ್ಟು ಏರ್ಪಡಿಸುವ ಸಲುವಾಗಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧಾರ್ಮಿಕ ಮುಂದಾಳುಗಳನ್ನು ಸೇರಿಸಿ ತುರ್ತು ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ತಿಳಿಸಿದ್ದಾರೆ. ಸದ್ರಿ ಸಭೆಗಳಲ್ಲಿ ಆರ್.ಡಿ.ಒ., ತಹಸೀಲ್ದಾರ್ ಮೊದಲಾದವರೂ ಹಾಜರಾಗಲಿರುವರು.

ಅಂಗಡಿಗಳು, ವ್ಯಾಪಾರ ಸಂಸ್ಥೆಗಳ ಚಟುವಟಿಕೆ ರಾತ್ರಿ 9 ಗಂಟೆವರೆಗೆ ಮಾತ್ರ :

ಸರಕಾರದ ಆದೇಶ ಪ್ರಕಾರ ಕಾಸರಗೋಡು ಜಿಲ್ಲೆ ಎಲ್ಲ ಪ್ರದೇಶಗಳಲ್ಲೂ ಅಂಗಡಿಗಳು, ವ್ಯಾಪಾರ ಸಂಸ್ಥೆಗಳು ರಾತ್ರಿ 9 ಗಂಟೆ ವರೆಗೆ ಮಾತ್ರ ಚಟುವಟಿಕೆ ನಡೆಸಬಹುದಾಗಿದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೋವಿಡ್ ರೋಗಿಗಳ ಸಂಖ್ಯೆ ಅಧಿಕಗೊಂಡಿರುವ, ಪಾಸಿಟಿವಿಟಿ ಸಂಖ್ಯೆ ಹೆಚ್ಚಿರುವ ಯಾವುದಾದರೂ ಸ್ಥಳೀಯಾಡಳಿತೆ ಸಂಸ್ಥೆಗಳಿದ್ದಲ್ಲಿ, ಹೆಚ್ಚುವರಿ ನಿಯಂತ್ರಣ ಅನಿವಾರ್ಯವಾದಲ್ಲಿ ಕೇರಳ ನಗರಸಭೆ ಕಾಯಿದೆ, ಕೇರಳ ಪಂಚಾಯತ್ ರಾಜ್ ಕಾಯಿದೆ ಪ್ರಕಾರದ ಅಧಿಕಾರ ಬಳಸಿ ತೀರ್ಮಾನ ಕೈಗೊಳ್ಳಲಾಗುವುದು.

ಸಾರ್ವಜನಿಕ ವಾಹನಗಳಲ್ಲಿ ನಿಗದಿತ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಒಯ್ಯಲಾಗುವುದು. ಬಸ್ ಗಳಲ್ಲಿ ಸ್ಟಾಂಡಿಗ್ ಪ್ರಯಾಣಕ್ಕೆ ಯಾವ ಕಾರಣಕ್ಕೂ ಅನುಮತಿಯಿಲ್ಲ. ಈ ಆದೇಶ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರ್.ಟಿ.ಒ. ತಿಳಿಸಿದ್ದಾರೆ.

ತಳ್ಳುಗಾಡಿಗಳಲ್ಲಿ ಪಾರ್ಸೆಲ್ ಮಾತ್ರ :

ತಲಪ್ಪಾಡಿಯಿಂದ ಕಾಲಿಕಡವು ವರೆಗಿನ ರಾಷ್ಟ್ರೀಯ ಹೆದ್ದಾರಿ ಮತ್ತು ಕಾಸರಗೋಡು- ಕಾಞಂಗಾಡ್ ಕೆ.ಎಸ್.ಟಿ.ಪಿ. ರಸ್ತೆ ಬದಿಗಳಲ್ಲಿ ಚಟುವಟಿಕೆ ನಡೆಸುತ್ತಿರುವ ತಳ್ಳುಗಾಡಿಗಳು ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಪಾರ್ಸೆಲ್ ವಿತರಣೆ ಮಾತ್ರ ನಡೆಸಬೇಕು. ರಾತ್ರಿ 9 ಗಂಟೆ ವರೆಗೆ ಮಾತ್ರ ಈ ಸಂಸ್ಥೆಗಳು ಕಾರ್ಯಾಚರಿಸಬೇಕು. ಜಿಲ್ಲೆಯ ಎಲ್ಲ ವ್ಯಾಪಾರ ಸಂಸ್ಥೆಯ ನೌಕರರು ಮಾಸ್ಕ್, ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು. ಅಂಗಡಿಗಳಲ್ಲಿ ಜನಸಂದಣಿಯುಂಟಾಗದಂತೆ ನೋಡಿಕೊಳ್ಳಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಟ್ಯೂಷನ್ ಸೆಂಟರ್ ಗಳಲ್ಲಿ ಕಟ್ಟುನಿಟ್ಟು ಕಡ್ಡಾಯ :

ಜಿಲ್ಲೆಯ ಟ್ಯೂಷನ್ ಸೆಂಟರ್ ಗಳಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಏಕಕಾಲಕ್ಕೆ ಹೆಚ್ಚುವರಿ ಮಕ್ಕಳಿಗೆ ತರಗತಿ ನಡೆಸಕೂಡದು. ಶಾಲೆಗಳ ಪರೀಕ್ಷೆಗಳಿಗೆ ಸಂಬಂಧಿಸಿ ಕೈಗೊಳ್ಳಲಾದ ಎಲ್ಲ ಕಟ್ಟುನಿಟ್ಟುಗಳನ್ನು ಇಲ್ಲೂ ಪಾಲಿಸಿ ತರಗತಿ ನಡೆಸಬೇಕು. ಆದೇಶ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಕ್ರೀಡಾ ಪಂದ್ಯಾಟಗಳು ಸಲ್ಲದು :

ಮುಕ್ತ ಮೈದಾನ, ಒಳಾಂಗಣ ಕ್ರೀಡಾಂಗಣ ಇತ್ಯಾದಿ ಕಡೆ ಯಾವುದೇ ರೀತಿಯ ಕ್ರೀಡಾ ಪಂದ್ಯಾಟಗಳನ್ನು ನಡೆಸಕೂಡದು ಎಂದು ಸಭೆ ತಿಳಿಸಿದೆ.

ವಿವಾಹ, ಇನ್ನಿತರ ಸಮಾರಂಭಗಳಿಗೆ ಮುಂಗಡ ಮಂಜೂರಾತಿ ಪಡೆಯಬೇಕು :

ನಗರಸಭೆ/ ಗ್ರಾಮ ಪಂಚಾಯತ್ ಮಟ್ಟದ ಪ್ರತಿ ವಾರ್ಡ್ ಗಳಲ್ಲಿ ನಡೆಯುವ ವಿವಾಹ, ಇನ್ನಿತರ ಸಮಾರಮಭಗಳನ್ನು ನಡೆಸುವ ವೇಳೆ ಸ್ಥಲೀಯಾಡಳಿತ ಸಂಸ್ಥೆಗಳಿಂದ ಮುಂಗಡ ಮಂಜೂರಾತಿ ಪಡೆಯಬೇಕು. ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಗರಿಷ್ಠ 100 ಮಂದಿ ಮಾತ್ರ ಭಾಗವಹಿಸಿ ಸಮಾರಂಭ ನಡೆಸಬೇಕು.

ಸ್ಥಳೀಯಾಡಳಿತ ಸಂಸ್ಥೆಗಳಿಂದ ಪಡೆಯುವ ಅನುಮತಿಯ ಮಾಹಿತಿಯನ್ನು ಆಯಾ ಸ್ಥಳೀಯ ಪೊಲೀಸ್ ಠಾಣೆಗಳ ಸ್ಟೇಷನ್ ಮಾಸ್ಟರ್ ಅವರ ಗಮನಕ್ಕೆ ತರಬೇಕು. ನಗರಸಭೆ/ ಗ್ರಾಮ ಪಂಚಾಯತ್ ಮಟ್ಟದ ಜನಜಾಗೃತಿ ಸಮಿತಿಗಳ ಚಟುವಟಿಕೆ ಚುರುಕುಗೊಳಿಸಬೇಕು. ಮಾಸ್ಟರ್ ಯೋಜನೆಯ ಶಿಕ್ಷಕರ, ಸೆಕ್ಟರಲ್ ಮೆಜಿಸ್ಟ್ರೇಟ್ ಗಳ ಸಹಾಯಗಳೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳು ಚುರುಕುಗೊಳ್ಳಬೇಕು.

ಈಗಾಗಲೇ ಮಂಜೂರಾತಿ ಪಡೆದ ಸಮಾರಂಭಗಳನ್ನು ಹೊರತುಪಡಿಸಿ, ಇತರ ಯಾವುದೇ ಕಾರ್ಯಕ್ರಮ ಗಳನ್ನು ಮುಂದಿನ ಎರಡು ವಾರಗಳ ಅವಧಿಯಲ್ಲಿ ನಡೆಸಕೂಡದು. ಅನುಮತಿ ಪಡೆದಿರುವ ಸಮಾರಂಭ ಗಳಲ್ಲಿ ಉತ್ಸವಗಳನ್ನು ಹೊರತುಪಡಿಸಿ, ಅನಿವಾರ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ನಡೆಸಬೇಕು. ಆರಾಧನಾಲಯಗಳಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಖಚಿತಪಡಿಸಿದ ನಂತರವಷ್ಟೇ ಆಸ್ತಿಕರಿಗೆ ಪ್ರವೇಶಾತಿ ನೀಡಬೇಕು.

ಜಿಲ್ಲೆಯ ಸಮುದ್ರ ಕಿನಾರೆಗಳ ಸಹಿತ ಪ್ರವಾಸಿ ತಾಣಗಳಲ್ಲಿ ಕೋವಿಡ್ ಕಟ್ಟುನಿಟ್ಟು ಪಾಲನೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೋವಿಡ್ ಸಂಹಿತೆಗಳನ್ನು ಉಲ್ಲಂಘಿಸುವ ಮಂದಿಯ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಸೆಕ್ಟರ್ ಮೆಜಿಸ್ಟ್ರೇಟ್ ಗಳ ಸಹಕಾರದೊಂದಿಗೆ ಕೇಸು ದಾಖಲಿಸುವಂತೆ ಆದೇಶ ನೀಡಲಾಗಿದೆ. ಸೆಕ್ಟರ್ ಮೆಜಿಸ್ಟ್ರೇಟ್ ಗಳ ಚಟುವಟಿಕೆ ಅವಲೋಕನ ನಡೆಸುವ ನಿಟ್ಟಿನಲ್ಲಿ ಎ.ಡಿ.ಎಂ. ಅವರ ನೇತೃತ್ವದಲ್ಲಿ ಎರಡು ದಿನಗಳಿಗೊಮ್ಮೆ ಝೂಂ ಸಭೆ ನಡೆಯಲಿದೆ.

ಅಂಗಡಿಗಳ, ಹೋಟೆಲ್ ಗಳ ಸಹಿತ ವ್ಯಾಪಾರ ಸಂಸ್ಥೆಗಳ ಕಾರ್ಮಿಕರು, ಸಾರ್ವಜನಿಕ ವಾಹನಗಳ ಸಿಬ್ಬಂದಿ ಕಡ್ಡಾಯವಾಗಿ ಎರಡು ವಾರಗಳಿಗೊಮ್ಮೆ ಕೋವಿಡ್ ತಪಾಸಣೆಗೆ ಒಳಗಾಗಬೇಕು. ಈ ಬಗ್ಗೆ ಸ್ಥಳೀಯಾಡಳಿತೆ ಸಂಸ್ಥೆಗಳೂ, ಆರ್.ಟಿ.ಒ. ಅಗತ್ಯದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿಗಳಲ್ಲಿ ಟಾಟಾ ಕೋವಿಡ್ ಆಸ್ಪತ್ರೆಗೆ ಶಾಶ್ವತ ವಿದ್ಯುತ್ ಸಂಪರ್ಕ ಒದಗಿಸಲು ಕೆ.ಎಸ್.ಇ.ಬಿ. ಡೆಪ್ಯೂಟಿ ಪ್ರಧಾನ ಇಂಜಿನಿಯರ್ ಗೆ ಅಂಡರ್ ಟೇಕಿಂಗ್ ನೀಡಿ ನಿಧಿ ಮಂಜೂರುಗೊಳಿಸುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸುವಂತೆ ಅವರು ಆದೇಶಿಸಿದರು. ಸದ್ರಿ ಮೊಬಲಗು ಎಸ್.ಡಿ.ಆರ್.ಎಫ್ ನಿಂದ ತುರ್ತು ಮಂಜೂರಾತಿಗೆ ಸರಕಾರಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ 11000 ಕೋವಿಡ್ ತಪಾಸಣೆ ನಡೆಸಲು ಸರಕಾರ ಆದೇಶ ನೀಡಿದೆ. ಸದ್ರಿ ಹಿನ್ನೆಲೆಯಲ್ಲಿ ತಪಾಸಣೆ ಹೆಚ್ಚಿಸಲು ತೊಡಕುಗಳಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

ವಾಕ್ಸಿನೇಷನ್ ಚಟುವಟಿಕೆಗಳೂ ತೃಪ್ತಿಕರವಾಗಿ ಮುನ್ನಡೆ ಸಾಧಿಸುತ್ತಿವೆ. ಕೋವಿಡ್ ಪಾಸಿಟಿವ್ ರೋಗಿಗಳ ಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಸಾಪ್ ಕಮ್ಯುನಿಟಿ ಸ್ಕಿಲ್ ಪಾರ್ಕ್ ನ ಸಿ.ಎಫ್ .ಎಲ್.ಟಿ.ಸಿ. ತುರ್ತಾಗಿ ಚಟುವಟಿಕೆ ಆರಂಭಿಸಲಾಗುವುದು.

ನೀಲೇಶ್ವರ ಭಾಗದ ಪ್ರದೇಶಗಳಲ್ಲಿ ಅತ್ಯಧಿಕ ಕೋವಿಡ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಕಣ್ಣೂರು ವಿವಿಯ ನೀಲೇಶ್ವರ ಕ್ಯಾಂಪಸ್ (ಪಾಲಾತ್ತಡಂ) ನ್ನೂ ಈ ಅಗತ್ಯಕ್ಕಾಗಿ ವಹಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ವೈದ್ಯಾಧಿಕಾರಿ ವಿನಂತಿಸಿದ್ದಾರೆ. ಇದನ್ನು ಅಂಗೀಕರಿಸಿ ಆದೇಶ ಪ್ರಕಟಿಸಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆನ್ ಲೈನ್ ರೂಪದಲ್ಲಿ ಈ ಸಭೆ ನಡೆದಿತ್ತು.

Comments are closed.