ಕರಾವಳಿ

ಭೂಮಾಪಕರ ಪ್ರತಿಭಟನೆ ನಿಲ್ಲಿಸಿ- ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಿ : ಎಸ್‌ಡಿಪಿಐ

Pinterest LinkedIn Tumblr

ಮಂಗಳೂರು : ಪ್ರತಿಭಟನೆಯಲ್ಲಿ ನಿರತರಾಗಿರುವ ಭೂಮಾಪಕರ ಬೇಡಿಕೆಯನ್ನು ಈಡೇರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಶೀಘ್ರ ಪರಿಹರಿಸ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಘಟಕ ಆಗ್ರಹಿಸಿದೆ.

ಮಂಗಳೂರಿನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಅವರು, ದ.ಕ ಜಿಲ್ಲೆಯ ಭೂಮಾಪನಾ ಇಲಾಖೆಯ ಭೂಮಾಪಕರು ತಮಗೆ ಕೆಲಸ ಖಾಯಂ ಮಾಡಬೇಕು.

ಈ ಹಿಂದಿನ ನಮ್ಮ ಗೌರವಧನವನ್ನು ಸಮರ್ಪಕವಾಗಿ ಪಾವತಿಸಬೇಕೆಂದು ಕಳೆದ ಹದಿನೈದು ದಿನಗಳಿಂದ ತಮ್ಮ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಜನಸಾಮಾನ್ಯರು, ರೈತರು, ಕೂಲಿ ಕಾರ್ಮಿಕರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುಮಾರು 20 ವರ್ಷದಿಂದ ಭೂಮಾಪಕರಾಗಿ ಕೆಲಸ ಕಾರ್ಯ ನಿರ್ವಹಿಸುತ್ತಿರುವ ಸದ್ರಿ ಭೂಮಾಪಕರ ಬೇಡಿಕೆಯನ್ನು ಸರಕಾರ ಈಡೇರಿಸಿ ಇವರನ್ನು ಖಾಯಂ ಮಾಡುವುದರ ಮೂಲಕ ಇವರ ಹೋರಾಟಕ್ಕೆ ನ್ಯಾಯ ಒದಗಿಸಿಕೊಡಬೇಕು, 2000 ಭೂಮಾಪಕರು ಸುಮಾರು 17 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು ಇವರನ್ನು ಖಾಯಂ ಮಾಡದೆ ಇದೀಗ ಸರಕಾರ ಹೊಸದಾಗಿ 2000 ಭೂಮಾಪಕ ಹುದ್ದೆಗೆ ನೇಮಕ ಮಾಡಲು ತಯಾರಾಗಿರುತ್ತಾರೆ.

ಸಿದ್ದರಾಮಯ್ಯನವರ ಸರಕಾರದಲ್ಲಿ ಇವರನ್ನು ಖಾಯಂ ಮಾಡಲು ಪ್ರಯತ್ನಗಳು ನಡೆದಿದ್ದರೂ ಕೆಲವೊಂದು ಕಾರಣದಿಂದ ಖಾಯಂ ಮಾಡಲಾಗಿಲ್ಲ. ಪ್ರತೀ ತಾಲೂಕಿನಲ್ಲಿ ಅಂದಾಜು 20 ಭೂಮಾಪಕರ ಅಗತ್ಯ ಇದ್ದು, ಸರಕಾರಿ ಭೂಮಾಪಕರು ಕೇವಲ 5 ರಿಂದ 7 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದವರು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಖಾಯಂ ಆಗದ ಕಾರಣ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದಾರೆ.

ಪ್ರತೀ ತಾಲೂಕುಗಳಲ್ಲಿ ದಿನವೊಂದಕ್ಕೆ ಕನಿಷ್ಠ ಪಕ್ಷ 30 ರಿಂದ 40 ಅರ್ಜಿಗಳು ಭೂಮಾಪನಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆಯಾಗುತ್ತಿದ್ದು ಇದೀಗ ಭೂಮಾಪಕರ ಪ್ರತಿಭಟನೆಯಿಂದಾಗಿ ಪ್ರತೀ ತಾಲೂಕುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅರ್ಜಿಗಳು ಬಾಕಿಯಾಗಿದೆ ಇದರಿಂದಾಗಿ ಮೊದಲೇ ಕೊರೋನಾ, ಲಾಕ್‌ಡೌನ್‌ನಿಂದಾಗಿ ಆರ್ಥಿಕ ಹೊಡೆತಕ್ಕೆ ಒಳಗಾಗಿರುವ ಜನಸಾಮಾನ್ಯರು ಇದೀಗ ದಿನನಿತ್ಯ ತಮ್ಮ ದುಡಿಮೆಯನ್ನು ಮೊಟಕುಗೊಳಿಸಿ ಕಛೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಂದಾಯ ಇಲಾಖೆ, ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಭೂಮಾಪಕರ ಸಮಸ್ಯೆಯನ್ನು ಬಗೆಹರಿಸಿ ನಾಗರಿಕರಿಗೆ ಆಗುವ ತೊಂದರೆಗೆ ಕಡಿವಾಣ ಹಾಕಬೇಕು ,ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಜಿಲ್ಲಾದ್ಯಂತ ದೊಡ್ಡ ಪ್ರಮಾಣದ ಜನಾಂದೋಲವನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಶಾಹುಲ್ ಹಮೀದ್ ಪತ್ರಿಕಾಗೋಷ್ಠಿಯ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಾಹುಲ್ ಎಸ್,ಎಚ್, ಅನ್ವರ್ ಸಾದಾತ್ ಬಜತ್ತೂರು, ಜಮಾಲ್ ಜೋಕಟ್ಟೆ, ನಾಸಿರ್ ಸಜೀಪ ಮುಂತಾದವರು ಉಪಸ್ಥಿತರಿದ್ದರು.

Comments are closed.