ಕರಾವಳಿ

ಡಾ. ರಾಘವೇಂದ್ರ ಬಿ.ಎಸ್ ನಿರ್ದೇಶನದ, ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಕನ್ನಡ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ

Pinterest LinkedIn Tumblr

ಮಂಗಳೂರು, ಎಪ್ರಿಲ್.14: ಕದಂಬಡಿ ಕ್ರಿಯೇಶನ್ಸ್ ಅರ್ಪಿಸುವ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ರಾಘವೇಂದ್ರ ಬಿ.ಎಸ್ ಅವರ ನಿರ್ದೇಶನದ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಕನ್ನಡ ಸಿನಿಮಾದ ಹಾಡಿನ ಧ್ವನಿ ಸುರುಳಿ (Tital Song) ಬಿಡುಗಡೆ ಸಮಾರಂಭ ಮಂಗಳೂರಿನ ಪಂಪ್ ವೆಲ್ ಬಳಿಯಿರುವ ಪ್ರತಿಷ್ಠಿತ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌‌ನಲ್ಲಿ ಮಂಗಳವಾರ ಸಂಜೆ ನಡೆಯಿತು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕ ರಿಚರ್ಡ್ ಕೊಯೆಲ್ಹೋ, ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿ ಕುಮಾರ್, ಕೆಎಂಸಿ ಮಂಗಳೂರು ಇದರ ಡಾ.ಜಿ.ಜಿ ಭಟ್ ಅಥಿತಿಗಳಾಗಿದ್ದರು.
ಲವ್ಲಿ ಸ್ಟಾರ್ ಪ್ರೇಮ್, ನಟಿ ಬೃಂದಾ ಆಚಾರ್ಯ, ನಟ ವಿಕಾಸ್ ಪುತ್ರನ್, ನಟ ನಿರೂಪಕ ಮಾಸ್ಟರ್ ಆನಂದ್, ಡಿಒಪಿ ನವೀನ್ ಕುಮಾರ್, ಡಾ.ಮುರಳಿದರ್, ರಾಜೇಶ್ ಭಟ್, ಗಾಯಕ ವಿಹಾನ್, ಗಿಟಾರ್ ವಾದಕ ಚರಣ್, ತ್ಯಾಗರಾಜ ಮತ್ತಿತ್ತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಹ-ನಿರ್ಮಾಪಕರಾದ ಡಾ.ಅರ್ಕಿತ್ ಬೊಲೂರು ಅವರು ಸ್ವಾಗತಿಸಿದರು, ಡಾ.ದೀಪ್ತಿ ಮತ್ತು ಆರ್.ಜೆ.ಅನುರಾಗ್ ಈ ಕಾರ್ಯಕ್ರಮವನ್ನು ನಿರೂಪಿಸಿದರು. ಚಿತ್ರದ ಟೀಸರ್ ಫೆಬ್ರವರಿ 13 ರಂದು ಬಿಡುಗಡೆಯಾಗಿ ಈಗಾಗಲೇ 2 ಮಿಲಿಯನ್ ವೀಕ್ಷಣೆಗಳನ್ನುಗಳಿಸಿದೆ.

ಡಾ.ರಾಘವೇಂದ್ರ ಬಿ.ಎಸ್ ಅವರ ನಿರ್ದೇಶನದ ಪ್ರಥಮ ಚಿತ್ರ:

‘ಪ್ರೇಮಂ ಪೂಜ್ಯಂ’ ಸಿನಿಮಾ ಡಾ.ರಾಘವೇಂದ್ರ ಬಿ.ಎಸ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಪ್ರಥಮ ಚಿತ್ರ, ನಟ ಪ್ರೇಮ್ ಅವರ 25 ನೇ ಚಿತ್ರವಾಗಿದೆ. ಪ್ರೇಮ್ ಜೊತೆಗೆ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಬೃಂದಾ ಆಚಾರ್ಯ ಮತ್ತು ಖ್ಯಾತ ನಟಿ ಐಂದ್ರಿತಾ ರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನು ಡಾ.ರಕ್ಷಿತ್ ಕೆದಂಬಾಡಿ, ಡಾ.ರಾಜ್‌ಕುಮಾರ್ ಜಾನಕಿರಾಮನ್, ಡಾ.ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ನಿರ್ಮಿಸಿದ್ದಾರೆ. ನಿರ್ದೇಶನದ ಹೊರತಾಗಿ ಡಾ.ರಾಘವೇಂದ್ರ ಬಿ.ಎಸ್ ಸಂಗೀತ ಮತ್ತು ಸಾಹಿತ್ಯ, ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ. ಈ ಚಿತ್ರದ ಸಹ- ನಿರ್ಮಾಪಕರಾಗಿ ಡಾ.ದೇವದಾಸ್ ಆಚಾರ್ಯ ಮತ್ತು ಡಾ. ಅರ್ಚಿತ್ ಬೊಲೂರು ಇದ್ದಾರೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕ ರಿಚರ್ಡ್ ಕೊಯೆಲ್ಹೋ ಅವರು, ನಮ್ಮ ಆಸ್ಪತ್ರೆಯ ಖ್ಯಾತ “ವೈದ್ಯರಾಗಿರುವ ಡಾ. ರಾಘವೇಂದ್ರ ಅವರು ಇದೀಗ ತಮ್ಮನ್ನು ಚಲನಚಿತ್ರಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಆದರೆ, ಅವರು ವೈದ್ಯರಾಗಿ ತಮ್ಮ ಕರ್ತವ್ಯವನ್ನು ಅಷ್ಟೇ ಶೃದ್ಧೆಯಿಂದ ಪಾಲಿಸುತ್ತಿದ್ದಾರೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ನಿರ್ಮಿಸಲಾಗಿರುವ ಈ ಚಲನ ಚಿತ್ರವನ್ನು ಹೆಚ್ಚಿನ ಜನರು ವೀಕ್ಷಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡಬೇಕು ಎಂದು ಹೇಳಿದರು.

ಓರ್ವ ಪ್ರತಿಭಾವಂತ ವೈದ್ಯರಾಗಿ “ಉತ್ತಮ ಚಲನಚಿತ್ರವನ್ನು ನಿರ್ದೇಶಿಸಿದ ಡಾ.ರಾಘವೇಂದ್ರ ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ, ಎರಡು ತಿಂಗಳ ಹಿಂದೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ತುಂಬಾ ಸುಂದರವಾಗಿ ಮೂಡಿಬಂದಿದೆ” ಪ್ರತಿಯೊಬ್ಬರು ಚಿತ್ರವನ್ನು ನೋಡಿ ಚಿತ್ರ ತಂಡಕ್ಕೆ ಆಶೀರ್ವದಿಸಬೇಕು ಎಂದು ಮತ್ತೋರ್ವ ಅಥಿತಿ ಕೆಎಂಸಿ ಮಂಗಳೂರು ಇದರ ಡಾ.ಜಿ.ಜಿ ಭಟ್ ಹೇಳಿದರು.

ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿ ಕುಮಾರ್ ಮಾತನಾಡಿ, ಓರ್ವ ಪರಿಣಿತ ವೈದ್ಯನಾಗಿದ್ದು ಕೊಂಡು ಜೊತೆಗೆ ಚಿತ್ರರಂಗದಲ್ಲಿ ಆಸಕ್ತಿ ಬೆಳೆಸಿಕೊಂಡು ಒಂದು ಸದಾಭಿರುಚಿಯ ಚಿತ್ರ ನಿರ್ಮಿಸಿದ ಡಾ.ರಾಘವೇಂದ್ರ ಅವರ ಸಾಧನೆ ಶ್ಲಾಘನೀಯವಾದದ್ದು, ವೈದ್ಯರಲ್ಲಿ ಉತ್ತಮ ಕಲಾವಿದರು ಇದ್ದಾರೆ ಎಂಬುವುದನ್ನು ಡಾ.ರಾಘವೇಂದ್ರ ಅವರು ನಿರೂಪಿಸಿದ್ದಾರೆ. ಪ್ರತಿಯೊಬ್ಬರಲ್ಲಿ ಕಲಾವಿದ ಅಡಗಿರುತ್ತಾನೆ. ಅದರೆ ನಮ್ಮ ಪ್ರತಿಭೆ ಹೊರಹಾಕಲು ಸತತ ಸಾಧನೆ ಬೇಕು. ಯಾವೂದೇ ರಂಗದಲ್ಲಿದ್ದವರು ಕೂಡ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಿದರೆ ಏನನ್ನು ಬೇಕಾದರೂ ಸಾಧಿಸ ಬಹುದು ಎಂಬುವುದಕ್ಕೆ ಡಾ.ರಾಘವೇಂದ್ರ ಅವರು ನಿದರ್ಶನ” ಎಂದು ಹೇಳಿದರು.

“ನಾನು 2005 ರಲ್ಲಿ ದೆಹಲಿಯಲ್ಲಿದ್ದಾಗ, ನಾನು ಕನ್ನಡ ಚಲನಚಿತ್ರಗಳನ್ನು ನೋಡುತ್ತಿದ್ದೆ. ನಾನು ಮೈಸೂರಿಗೆ ಬಂದಾಗ, ಪ್ರೇಮ್ ಅವರ ನೆನಪಿರಲಿ ಸಿನಿಮಾದ ಪೋಸ್ಟರ್ ಅನ್ನು ನೋಡಿದೆ. ಚಲನಚಿತ್ರ ತುಂಬಾ ಚೆನ್ನಾಗಿತ್ತು, ಹಾಗಾಗಿ ನಾನು ಅದನ್ನು ಮೂರು ಬಾರಿ ನೋಡಿದ್ದೇನೆ. ದುಡಿಮೆಯ ಜೊತೆ ಮೈಮನ ಉಲ್ಲಾಸಕ್ಕಾಗಿ ಕಲಾರಾಧನೆ, ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆ ಕೂಡ ಮೈಗೂಡಿಸಿಕೊಂಡು ಬಾಳಿದರೆ ಬದುಕಿನಲ್ಲಿ ನೆಮ್ಮದಿ ಸಿಗುತ್ತದೆ ಎಂದು ಕಮಿಷನರ್ ಎನ್ ಶಶಿ ಕುಮಾರ್ ಹೇಳಿದರು.

ನಟ ಪ್ರೇಮ್ ಮಾತನಾಡಿ, ಮಂಗಳೂರು ಎಂದರೆ ಪ್ರತಿಭೆಗಳ ತವರೂರು, ಪ್ರತಿಯೊಂದು ರಂಗದಲ್ಲೂ ಇಲ್ಲಿನ ಪ್ರತಿಭೆಗಳಿದ್ದಾರೆ. ಇಲ್ಲಿನ ಸಮುದ್ರದಷ್ಟೇ ವಿಶಾಲವಾದ ಮನಸಿರುವ ಇಲ್ಲಿನ ಜನರ ಜೊತೆ ಹಾಗೂ ಕಡಲತೀರಗಳನ್ನು ಹೊಂದಿರುವ ಮಂಗಳೂರಿನಲ್ಲಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತದೆ. ಇಲ್ಲಿನ ಸ್ಥಳಗಳು ಬೇಸರದ ಸಮಯದಲ್ಲಿ ನೆಮ್ಮದಿ ನೀಡುತ್ತದೆ. ನಿರ್ದೇಶಕ ಡಾ.ರಾಘವೇಂದ್ರ ಅವರು ಸಾಕಷ್ಟು ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿ, ನಾನು ಅವರ ಪ್ರೀತಿ ಮತ್ತು ಸಿನೆಮಾ ಮೇಲಿನ ಉತ್ಸಾಹವನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ “ಎಂದು ಹೇಳಿದರು.

ಇನ್ನು “ನಿರ್ದೇಶಕ ರಾಘವೇಂದ್ರ ಅವರು ನನ್ನನ್ನು ಸಂಪರ್ಕಿಸಿದಾಗ ನನ್ನ 24 ನೇ ಚಿತ್ರದ ನಂತರ ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ನಾನು ಈಗಾಗಲೇ ನಿರ್ಧರಿಸಿದ್ದೆ. ಆದರೆ ಅವರು ಕಥೆಯನ್ನು ತಿಳಿಸಿದಾಗ ಅವರು ಕಥೆ ಮೊದಲಿನಿಂದ ಕೊನೆಯವರೆಗೆ ಸ್ಪಷ್ಟವಾಗಿತ್ತು. ನನ್ನೆಲ್ಲ ಇದುವರೆಗಿನ ಚಲನಚಿತ್ರಗಳು ಸಂಗೀತದ ಹಿಟ್‌ಗಳಾಗಿವೆ, ಇದು 14 ಹಾಡುಗಳನ್ನು ಒಳಗೊಂಡಿದೆ” ಪ್ರತಿಯೊಬ್ಬರು ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹ ನೀಡಿ ಎಂದು ಪ್ರೇಮ್ ಹೇಳಿದರು.

ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್ ಅವರು ಮಾತನಾಡಿ, ಒಂದು ಉತ್ತಮ ಚಿತ್ರ ನಿರ್ಮಿಸಿದ ತೃಪ್ತಿ ಇದೆ. ಚಿತ್ರ ಸುಂದರವಾಗಿ ಮೂಡಿ ಬಂದಿದೆ. ಅದರಲ್ಲೂ ಸಂಗೀತಕ್ಕೆ ಬಹಳಷ್ಟು ಹೆಚ್ಚಿನ ಮಹತ್ವ ನೀಡಿ ದೇಶವಿದೇಶಗಳ ಸಂಗಿತಾ ಸಾಧನಗಳನ್ನು ಬಳಸಲಾಗಿದೆ. ಸುಮಧುರವಾದ ಹಾಡುಗಳು ಉತ್ತಮವಾಗಿ ಮೂಡಿ ಬಂದಿದ್ದು, ಎಲ್ಲರಿಗೂ ಮುದ ನೀಡುತ್ತದೆ.

ನನ್ನ ಈ ಚಿತ್ರಕ್ಕೆ ನನ್ನ ಜೊತೆ ಕೈ ಜೋಡಿಸಿದ ಹಾಗೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು. ಇದೇ ವೇಳೆ ಇಂದು ಬಿಡುಗಡೆಯಾದ ಚಿತ್ರದ ಶೀರ್ಷಿಕೆ ಗೀತೆಯನ್ನು ನಾನು ಸಂಪೂರ್ಣವಾಗಿ ನನ್ನ ರೋಗಿ ಭಾಂಧವರಿಗೆ ಅರ್ಪಿಸುವುದಾಗಿ ಘೋಷಿಸಿದರು.

Comments are closed.