ಕರಾವಳಿ

ಮಂಗಳೂರು:ಮೀನುಗಾರಿಕಾ ಬೋಟ್ ಅಪಘಾತ – ಮೂವರ ಮೃತದೇಹ ಪತ್ತೆ – ಮುಂದುವರಿದ ಶೋಧಕಾರ್ಯ

Pinterest LinkedIn Tumblr

ಮಂಗಳೂರು: ಮಂಗಳೂರಿನ ನವಮಂಗಳೂರು ಬಂದರ್ ನಿಂದ 42 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ದುರಂತದಲ್ಲಿ ಮೃತಪಟ್ಟ ಮೂವರು ಮೀನುಗಾರರ ಮೃತದೇಹ ಪತ್ತೆಯಾಗಿದೆ.

ಮಂಗಳೂರಿನ ಎನ್‌ಎಂಪಿಟಿಯಿಂದ ಸುಮಾರು 42 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕಾ ಬೋಟ್ ಅಪಘಾತವಾಗಿ ಮೂವರು ಸಾವನ್ನಪ್ಪಿ, ಆರು ಮಂದಿ ಮೀನುಗಾರರು ನಾಪತ್ತೆಯಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿತ್ತು.

ಅರಬ್ಬೀ ಸಮುದ್ರದಲ್ಲಿ ಹಡಗೊಂದು ಬೋಟ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಬವಿಸಿದೆ ಎನ್ನಲಾಗಿದೆ. ದುರ್ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಇತರ 14 ಮೀನುಗಾರರು ಕಾಣೆಯಾಗಿದ್ದರು. ಈ ಘಟನೆಯಲ್ಲಿ ರಕ್ಷಿಸಲ್ಪಟ್ಟವರನ್ನು ಪಶ್ಚಿಮ ಬಂಗಾಳ ಮೂಲದ ಸುನಿಲ್ ದಾಸ್ ಮತ್ತು‌ ತಮಿಳುನಾಡಿನ ವೆಲು ಮುರುಗನ್ ರಾಮಲಿಂಗನ್‌ ಎಂದು ಗುರುತಿಸಲಾಗಿದೆ.

ಇದೀಗ ಬೋಟ್ ದುರಂತದಲ್ಲಿ ಮೃತಪಟ್ಟ ಮೂವರು ಮೀನುಗಾರರ ಮೃತದೇಹವನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ವರ್ಗ ಮಂಗಳವಾರ ಪತ್ತೆ ಹಚ್ಚಿದೆ. ಆ ಪೈಕಿ ಮಾಣಕ್ಯದಾಸ್ ಮತ್ತು ಅಲೆಗ್ಸಾಂಡರ್ ಎಂಬವರ ಗುರುತು ಹಿಡಿಯಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ.

ಇತರ ಒಂಭತ್ತು ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ಕೋಸ್ಟ್‌ಗಾರ್ಡ್‌ನವರು ಶೋಧಕಾರ್ಯ ಮುಂದುವರಿಸಿದ್ದಾರೆ. ರಕ್ಷಿಸಲ್ಪಟ್ಟ ಇಬ್ಬರು ಮತ್ತು ಮೂವರ ಮೃತದೇಹವನ್ನು ಕಡಲ ಕಿನಾರೆಗೆ ತಂದು ಕೋಸ್ಟ್‌ಗಾರ್ಡ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ.‌

ಕೇರಳದ ಬೇಪೂರ್‌ನಿಂದ ಎ.11ರಂದು ಬೆಳಗ್ಗೆ 10 ಗಂಟೆಗೆ ಹೊರಟ ಮೀನುಗಾರಿಕೆಯ ಈ ಬೋಟ್ ಸೋಮವಾರ ತಡರಾತ್ರಿ ಸುಮಾರು 2:05ರ ವೇಳೆಗೆ ಮುಳುಗಡೆಯಾಯಿತು. ಸಮೀಪದಲ್ಲೇ ಇದ್ದ ಇನ್ನೊಂದು ಹಡಗು ಮತ್ತು ಮಾಹಿತಿ ‌ಪಡೆದ ಕೋಸ್ಟ್‌ಗಾರ್ಡ್ ಸಿಬ್ಬಂದಿ ವರ್ಗವು ತುರ್ತು ಕಾರ್ಯಾಚರಣೆ ನಡೆಸಿತ್ತು.

Comments are closed.