ಕರಾವಳಿ

ಕಾಂಗ್ರೆಸ್ ನಗರಾಧ್ಯಕ್ಷ ಪ್ರಕಾಶ್ ಬಿ. ಸಾಲ್ಯಾನ್ ಅಧಿಕಾರ ಸ್ವೀಕಾರ: ಜವಾಬ್ದಾರಿ ನಿಭಾಯಿಸಲು ಸರ್ವರ ಸಹಕಾರ ಯಾಚನೆ

Pinterest LinkedIn Tumblr

ಮಂಗಳೂರು: ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ.ಸಾಲ್ಯಾನ್ ಶನಿವಾರ ಸಂಜೆ ನಗರದ ಕುದ್ಮುಲ್ ರಂಗರಾವ್ ಪುರಭವನದ ಮಿನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.

ಮಾಜಿ ಶಾಸಕ ಜೆ.ಆರ್.ಲೋಬೋ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ, ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಬಳ್ಳಾಲ್ ಅವರು ಪ್ರಕಾಶ್ ಬಿ. ಸಾಲಿಯಾನ್ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಘೋಷಣೆ ಮಾಡಿದರು.

ಜಿಲ್ಲಾ ಮಟ್ಟದ ಮುಖಂಡರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಬಿ. ಸಾಲಿಯಾನ್ ಅವರು, ಮುಂದಿನ ದಿನಗಳಲ್ಲಿ ನಗರದಲ್ಲಿ ‘ಕೈ’ಗೆ ಬಲ‌ ತುಂಬುವ‌ ಪಣ ತೊಟ್ಟರು‌‌. ಕಾರ್ಪೊರೇಟರ್ ಆದಂಥ ಸಂದರ್ಭ ಮನಪಾ ಅನುದಾನ ಇಲ್ಲದೆ ಲೋಕಯ್ಯ ಶೆಟ್ಟಿಯವರ ಹೆಸರಲ್ಲಿ ವೃತ್ತ ನಿರ್ಮಿಸಲಾಗಿದೆ.

ಬಿಜೆಪಿಯವರು ಮಾತೆತ್ತಿದರೆ ಸ್ವಾಮಿ ವಿವೇಕಾನಂದರ ಹೆಸರೇಳುತ್ತಾರೆ. ಆದರೆ ತನ್ನ ಅವಧಿಯಲ್ಲಿ ಬಿಜೈಯಲ್ಲಿ ವಿವೇಕಾನಂದರ ಪಾರ್ಕ್ ಸ್ಥಾಪಿಸಲಾಗಿದೆ‌. ಇದೀಗ ದಕ್ಷಿಣ ಬ್ಲಾಕ್ ಆಂತರಿಕ ಚುನಾವಣೆಯಲ್ಲಿ ಅಧ್ಯಕ್ಷನನ್ನಾಗಿ ಒಮ್ಮತದಿಂದ ಆರಿಸಿದ್ದಾರೆ. ತಮಗೆ ನೀಡಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಹಿರಿಯ ಮುಖಂಡರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದಿದ್ದೇನೆ. ಈಗ ಸಿಕ್ಕಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಲು ಸರ್ವರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಮುಖಂಡ, ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಬಳ್ಳಾಲ್ ಅವರು, ಪ್ರಕಾಶ್ ಸಾಲ್ಯಾನ್ ಅವರು ಕಾರ್ಪೊರೇಟರ್ ಆಗಿದ್ದಾಗ ಉತ್ತಮ ಕೆಲಸ ಮಾಡಿದ್ದರಿಂದ ಕಳೆದ ಮನಪಾ ಚುನಾವಣೆಯಲ್ಲಿ ಒಂದು ಮತದ ಅಂತರದಿಂದಾದರೂ ಜಯ ಗಳಿಸುತ್ತಾರೆಂದು ಭಾವಿಸಲಾಗಿತ್ತು, ಆದರೆ ಅದೃಷ್ಟ ಕೈಕೊಟ್ಟು ಸೋತರೂ ಇದೀಗ ಅಧ್ಯಕ್ಷರಾಗಿ ಪ್ರಮೋಶನ್ ಪಡೆದಿದ್ದಾರೆ. ಮುಂದಕ್ಕೆ ಶಾಸಕ ಯಾರು ಬೇಕಾದರೂ ಆಗಬಹುದು, ಆದರೆ ಟಿಕೆಟ್ ರೇಸ್ ನಲ್ಲಿ ಸಾಲ್ಯಾನ್ ಅವರ ಹೆಸರು ಇರಬೇಕು ಎಂದು ಹೇಳಿದರು.

ಮಾಜಿ ಶಾಸಕ ಜೆ.ಆರ್.ಲೋಬೋ ಮಾತನಾಡಿ,‌ ಒಂದು ಜವಾಬ್ದಾರಿ ಹೂವಿನ ಹಾಸಿಗೆಯಲ್ಲ, ಇನ್ನಷ್ಟು ಜವಾಬ್ದಾರಿ ವಹಿಸಿಕೊಳ್ಳುವ ಒಂದು ವ್ಯವಸ್ಥೆ. ನಗರ ಬ್ಲಾಕ್ ನಲ್ಲಿ ದಕ್ಷಿಣಕ್ಕಿಂತ ಹೆಚ್ಚು ಸಮಸ್ಯೆಗಳಿವೆ. ಪ್ರಕಾಶ್ ಸಾಲ್ಯಾನ್ ಅವರಿಂದ ಪಕ್ಷಕ್ಕೆ ಲಾಭವಾಗಲಿದೆ. ಆದರೆ ಅವರ ಬಗ್ಗೆ ಟೀಕಿಸುತ್ತಾ ಕೂರದೆ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಲು ಅವಶ್ಯಕತೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಸಮುದಾಯ ಭಾಗವಹಿಸಿದ್ದು, ಸಾಲ್ಯಾನ್ ಅವರ ದಕ್ಷ ನಾಯಕತ್ವಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ಮನಪಾ ವಿಪಕ್ಷ ನಾಯಕ ಎ.ಸಿ.ವಿನಯ್ ರಾಜ್, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಕಳ್ಳಿಗೆ ತಾರನಾಥ ಶೆಟ್ಟಿ, ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್ ದಾಸ್, ಕೃಪಾ ಆಳ್ವ, ನಿತ್ಯಾನಂದ ಶೆಟ್ಟಿ, ರಜನೀಶ್ ಕಾಪಿಕಾಡ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮಾಜಿ ಮೇಯರ್, ಹಾಲಿ ಮನಪಾ ಸದಸ್ಯ ಎಂ. ಶಶಿಧರ್ ಹೆಗ್ಡೆ ಸ್ವಾಗತಿಸಿದರು. ರೋಹಿತ್ ಉಳ್ಳಾಲ ನಿರೂಪಿಸಿದರು.

Comments are closed.