ಕರಾವಳಿ

ಓದುವಿಕೆ ಮನುಷ್ಯನನ್ನು ಸತ್‌ಚಿಂತಕನನ್ನಾಗಿ ಮಾಡುತ್ತದೆ : ಕಡಂದಲೆ ಸುರೇಶ್ ಭಂಡಾರಿ

Pinterest LinkedIn Tumblr

ಮುಂಬಯಿ : ಮೊಗವೀರ ಸಮಾಜವು ಗುರಿಕಾರ ಪದ್ಧತಿಯ ವ್ಯವಸ್ಥೆಯನ್ನು ಇಂದಿಗೂ ಕಾಪಾಡಿಕೊಂಡಿರುವ ಸಮಾಜವಾಗಿದ್ದು, ಸಾಧಕರೂ, ಸಾಹಸಿಗರೂ ಮತ್ತು ವೀರರೂ ಆದ ಮೊಗವೀರರು ಸಂಘಟನೆಗೆ, ಒಗ್ಗಟ್ಟಿಗೆ, ಸತ್ಯದ ಹೋರಾಟಕ್ಕೆ ಸಶಕ್ತ ವ್ಯವಸ್ಥೆವುಳ್ಳ ಪ್ರತಿಷ್ಠಿತ ಸಮಾಜವಾಗಿದೆ. ಊರಿನಲ್ಲಿ ಭಜನಾ ಮಂದಿರ, ವ್ಯಾಯಾಮ ಶಾಲೆ, ಶಿಕ್ಷಣ ಸಂಸ್ಥೆಗಳನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪಿಸಿದ ಕೀರ್ತಿವಂತ ಸಮಾಜವಾಗಿದೆ. ಇಂದು ಓದಲು ಪುಸ್ತಕಗಳೇ ಬೇಡವಾದ ಕಾಲದಲ್ಲಿ ಎಲ್ಲರೊಂದಿಗೆ ಬೆರೆಯುತ್ತಾ ನಮಗೆ ನಿದರ್ಶನರಾಗಿರುವ ಅಶೋಕ ಸುವರ್ಣರ ಸ್ವರಚಿತ ಮತ್ತು ಅವರ ಜೀವನಶೈಲಿಯ ಬರಹಗಳ ಎರಡು ಕೃತಿಗಳು ಬಿಡುಗಡೆ ಆಗಿರುವುದು ಸ್ತುತ್ಯರ್ಹ. ಪುಸ್ತಕಗಳು ಸ್ನೇಹತ್ವಕ್ಕೆ ಮತ್ತು ಶ್ರೇಯಸ್ಸಿಗೆ ಸಮಾನವು. ಹುಟ್ಟಿದ ವ್ಯಕ್ತಿಗೆ ಸಾವಿದೆ. ಸಾಹಿತ್ಯವನ್ನು ಓದುವುದರಿಂದ ವ್ಯಕ್ತಿ ಸುಸಂಸ್ಕೃತನಾಗುತ್ತಾನೆ ಹಾಗೂ ಸತ್ ಚಿಂತಕನಾಗುತ್ತಾನೆ. ಸಮಾಜಕ್ಕೆ ಹಾನಿಯುಂಟು ಮಾಡುವ, ಆಪತ್ತು ತರುವ ಯಾವುದೇ ದುಷ್ಕಾರ್ಯವನ್ನು ಮಾಡಲಾರ. ಆದ್ದರಿಂದ ಲೇಖಕರು ಯಾವಾಗಲೂ ಗೌರವಾನ್ವಿತರು. ಆದರೆ ಬರಹಕ್ಕೆ ಸಾವಿಲ್ಲ ಎಂದು ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್. ಭಂಡಾರಿ ತಿಳಿಸಿದರು.

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಂಧೇರಿ ಪಶ್ಚಿಮದ ಮೊಗವೀರ ಭವನದ ಎಂವಿಎಂ ಶಾಲಿನಿ ಜಿ.ಶಂಕರ್ ಸೆಂಟರ್ ನ ಸಭಾಗೃಹದಲ್ಲಿ ಆಯೋಜಿಸಿದ್ದ “ಮುಂಬಯಿ ಪರಿಕ್ರಮಣ” ಮತ್ತು “ಸಮರ್ಥ ಪತ್ರಕರ್ತ ಮತ್ತು ಸಂಪಾದಕ ಅಶೋಕ ಸುವರ್ಣ” ಈ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಸುರೇಶ್ ಭಂಡಾರಿ ಮಾತನಾಡಿದರು.

ಎಂವಿಎಂ ಡಿಗ್ರಿ ಕಾಲೇಜ್ ನ ಪ್ರಾಂಶುಪಾಲ ಡಾ| ಗೋಪಾಲ ಕಲಕೋಟಿ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮವನ್ನು ಮುಂಬಯಿ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಕೃಷ್ಣಕುಮಾರ್ ಎಲ್. ಬಂಗೇರ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಏಕಕಾಲಕ್ಕೆ ಮೊಗವೀರ ಮಂಡಳಿ ಉಪಾಧ್ಯಕ್ಷ, ಮೊಗವೀರ ಮಾಸಿಕದ ಸಂಪಾದಕ, ಅಶೋಕ ಎಸ್. ಸುವರ್ಣ ಬರೆದ, ಮೊಗವೀರ ವ್ಯವಸ್ಥಾಪಕ ಮಂಡಳಿ ಪ್ರಕಟಿತ “ಮುಂಬಯಿ ಪರಿಕ್ರಮಣ” ಕೃತಿಯನ್ನು ಕಡಂದಲೆ ಸುರೇಶ್ ಮತ್ತು ಅಂತರಾಷ್ಟ್ರೀಯ ಪುರಸ್ಕೃತ ಕವಿ ಗೋಪಾಲ ತ್ರಾಸಿ ರಚಿಸಿ ಸಾಹಿತ್ಯ ಬಳಗ ಮುಂಬಯಿ ಪ್ರಕಾಶಿತ ‘ಸಮರ್ಥ ಪತ್ರಕರ್ತ, ಸಂಪಾದಕ ಅಶೋಕ ಸುವರ್ಣ’ ಕೃತಿಯನ್ನು ರಂಗತಜ್ಞ, ಕನ್ನಡ ಸಾಹಿತ್ಯ ಪರಿಷದ್ ಬೃಹನ್ಮುಂಬಯಿ ಘಟಕದ ಕಾರ್ಯದರ್ಶಿ ಡಾ| ಭರತ್ ಕುಮಾರ್ ಪೊಲಿಪು ಬಿಡುಗಡೆಗೊಳಿಸಿದರು.

ಪುಸ್ತಕ ರಚನೆಯಿಂದ ಬರುವಂತಹ ಆತ್ಮ ಸಂತೋಷ ದೊಡ್ಡದು. ಪುಸ್ತಕಗಳು ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರ ಇವುಗಳಲ್ಲದೆ ಅನೇಕ ಮಾಹಿತಿಗಳನ್ನು ಒದಗಿಸುವ ಮಾಧ್ಯಮವಾಗುತ್ತದೆ. ಇದನ್ನು ಓದುವುದರಿಂದ ಜ್ಞಾನ ವಿಸ್ತಾರವಾಗಿ ಅಜ್ಞಾನ ಕಡಿಮೆಯಾಗುತ್ತದೆ. ಅಹಂಕಾರ ನಾಶವಾಗುತ್ತದೆ. ನಾವು ವಿನೀತರಾಗುತ್ತೇವೆ. ಪ್ರೀತಿ ಹಿಗ್ಗಿಸಿಕೊಳ್ಳುತ್ತದೆ. ಶೂನ್ಯದಿಂದ ಪ್ರಾರಂಭವಾದ ಬದುಕು ಆತನು ಎದುರಿಸುವ ಸವಾಲುಗಳಿಂದ ಯಶಸ್ವಿಯಾಗಿ ಬದುಕಿನಲ್ಲಿ ಸಾಧಕನಾಗುತ್ತಾನೆ. ಹಾಗೆಯೇ ಸಾಧನೆಯ ಮೂಲಕ ಬದುಕು ಕಟ್ಟಿಕೊಳ್ಳುವಲ್ಲಿ ಕ್ರಿಯಾಶೀಲರಾಗಿ, ಯಶಸ್ವಿ ಪತ್ರಕರ್ತನಾಗಿ, ಸಾಂಘಿಕ ಚಟುವಟಿಕೆಯಲ್ಲೂ ತನ್ನ ತ್ಯಾಗದ ಮೂಲಕ ಗುರುತಿಸಿಕೊಂಡಿರುವ ಅಶೋಕ ಸುವರ್ಣರ ಬಗ್ಗೆ ಬರೆಯುವುದೆಂದರೆ ಸುಲಭ ಸಾಧ್ಯವಲ್ಲ. ತ್ರಾಸಿಯವರು ಸಂಯಮದಿಂದ ತುಲನಾತ್ಮಕವಾಗಿ, ಆಮೂಲಾಗ್ರವಾಗಿ ಈ ಕೃತಿಯನ್ನು ರಚಿಸಿದ್ದಾರೆ ಎಂದು ಡಾ| ಭರತ್ ಕುಮಾರ್ ಪೊಲಿಪು ಹೇಳಿದರು.

ಮೊಗವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್ ಅವರು ಅತಿಥಿ ಸ್ಥಾನದಿಂದ ಮಾತನಾಡುತ್ತಾ, ಶ್ರದ್ಧೆಯಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಜ್ಞಾನದಿಂದ ಶಾಸ್ತ್ರ ಲಭ್ಯವಾಗುತ್ತದೆ. ಶಾಸ್ತ್ರದಿಂದ ಶಾಸ್ತ್ರಿ ಗಳಾಗಿ ಗುರುವಿನಂತೆ ಪ್ರಬಲನಾಗುತ್ತಾನೆ. ಅಯೋಗ್ಯನು ಯೋಗ್ಯನಾಗುತ್ತಾನೆ. ಶ್ರದ್ಧೆ ಯಿಂದಲೇ ಎಲ್ಲಾ ಗುಣಗಳು ವ್ಯಕ್ತಿಯಲ್ಲಿ ಚೇತರಿಸಿಕೊಳ್ಳುತ್ತದೆ. ಶಿಲ್ಪಿಯು ಯಾವ ರೀತಿಯಲ್ಲಿ ಶಿಲೆಯನ್ನು ಕೊರೆದು ಸಾಕಾರ ಮೂರ್ತಿಯನ್ನು ನಿರ್ಮಿಸುತ್ತಾನೋ ಅದೇ ರೀತಿ ಲೇಖಕನು ತನ್ನ ಲೇಖನಿಯ ಮೂಲಕ ಪ್ರಬಲವಾದ ಕೃತಿಗಳನ್ನು ರಚಿಸಬಲ್ಲ ಎಂಬುದಕ್ಕೆ ಅಶೋಕ್ ಸುವರ್ಣ ಉದಾಹರಣೆಯಾಗುತ್ತಾರೆ. ಅವರ ಶ್ರದ್ಧೆಯೇ ಸಾರ್ಥಕ ಸಂಪಾದಕನಾಗಲು ಕಾರಣ ಎಂದು ಅಭಿಪ್ರಾಯಪಟ್ಟರು.

ಸೋಮ ಸಾಯಿಸ್ಕಂದ ಆಶ್ರಮ ಮೈಸೂರು ಇದರ ವಿಶ್ವಸ್ಥ ಸದಸ್ಯ, ಉದ್ಯಮಿ ಶ್ರೀನಿವಾಸ ಎನ್. ಕಾಂಚನ್, ಒಡೆಯರಬೆಟ್ಟು ಮೊಗವೀರ ಸಭಾ ಮುಂಬಯಿ ಅಧ್ಯಕ್ಷ ಗೋವಿಂದ ಎನ್.ಪುತ್ರನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಉದ್ಯಮಿಗಳಾದ ಸುಧೀರ್ ಎಸ್. ಪುತ್ರನ್ ಮತ್ತು ಜಿತೇಂದ್ರಕುಮಾರ್ ವಿ. ಕೋಟ್ಯಾನ್, ಮದರ್ ಇಂಡಿಯಾ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿ ಹರೀಶ್ ಮೈಂದನ್ ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಎಲ್ಲಾ ರೀತಿಯಲ್ಲಿ ಕ್ರಿಯಾಶೀಲರಾಗಿರುವ ಮುಂಬಯಿ ತುಳು ಕನ್ನಡಿಗರು ಲೇಖಕ ರಾಗಿಯೂ ತಮ್ಮತನ ತೋರಿಸಿ ಕೊಟ್ಟವರು. ಸಮಾಜದ ಶ್ರೇಯೋನ್ನತಿಗೆ ಇಂತಹ ಲೇಖಕರ ಪಾತ್ರ ಬಹಳ ಮಹತ್ವದ್ದು ಎಂದು ಕೃಷ್ಣಕುಮಾರ್ ಎಲ್. ಬಂಗೇರ ಅವರು ಕಾರ್ಯಕ್ರಮ ಉದ್ಘಾಟಿಸಿ ನುಡಿದರು.

ಅಶೋಕ್ ಅವರ ಸಾಧನೆ ಈ ಕೃತಿಯನ್ನು ನನ್ನಿಂದ ಬರೆಸುವುದು ಅವರ ಪ್ರಾಮಾಣಿಕತೆ ಎಲ್ಲೂ ಸ್ವಹಿತಕ್ಕಾಗಿ ಬಯಿಸದೆ, ಕುರ್ಚಿಗಾಗಿ ಹಾತೊರೆಯದೆ ಇರುವುದು ಅಶೋಕ್ ಸುವರ್ಣ ಅವರಂತಹ ರೋಲ್ ಮೋಡೆಲ್ ಆಗಿರುವ ಅವರ ಕೃತಿಯನ್ನು ಬರೆಯಲು ನನಗೆ ಖುಷಿ ಕೊಟ್ಟಿದೆ ಎಂದು ಕೃತಿಕರ್ತ ಗೋಪಾಲ ತ್ರಾಸಿ ನುಡಿದರು.

85 ರ ದಶಕದಲ್ಲಿ ಬರೆದಂತಹ ಅಂದಿನ ಲೇಖನಗಳು ಇಂದೂ ಪ್ರಸ್ತುತ ಅನ್ನುವುದು ಕೃತಿಯ ಹೆಗ್ಗಳಿಕೆ. ಬರವಣಿಗೆಯನ್ನು ಶಿಸ್ತು ಮತ್ತು ವಿಷಯಕ್ಕೆ ಒತ್ತು ಕೊಟ್ಟಿರುವುದನ್ನು ಗಮನಿಸಬಹುದು. ಈ ಕೃತಿ ಒಂದು ಗೈಡ್ ತರ ನಮ್ಮ ಜೊತೆ ಸದಾ ಇರಲಿದೆ ಎಂದು ಪರಿಕ್ರಮಣ ಕೃತಿ ಪರಿಚಯಿಸಿ ಸಾಹಿತಿ, ಕವಿ ಡಾ| ಜಿ.ಪಿ.ಕುಸುಮಾ ಅಭಿಪ್ರಾಯ ಪಟ್ಟರು.

ಮುಂಬಯಿ ಕನ್ನಡಿಗರು ಮರೆಯಲಾರದ ಮರೆಯಬಾರದ ವ್ಯಕ್ತಿತ್ವ ಅಶೋಕ್ ಸುವರ್ಣ ಅವರದ್ದು, ಅಶೋಕ್ ತಮ್ಮ ಬದುಕನ್ನು ಕಟ್ಟಿಕೊಂಡ ಬಗೆಯನ್ನು ಲೇಖಕರು ಚಿತ್ರಿಸಿ ದ್ದಾರೆ. ಅಶೋಕ್ ಅವರ ಜೀವನ ಕಥೆಯನ್ನು ಸರಳವಾದ ಭಾಷೆಯಲ್ಲಿ ಸವಿವರವಾಗಿ ಕಟ್ಟಿ ಕೊಟ್ಟಿರುವ ಲೇಖಕ ಗೋಪಾಲ ತ್ರಾಸಿ ಅವರಿಗೆ ಲೇಖಕ, ಸಂಘಟಕ ಜಿ.ಟಿ ಆಚಾರ್ಯ ಅಭಿನಂದಿಸಿದರು.

ಸೂಕ್ಷ್ಮ ಸಂಶೋಧಕ ದೃಷ್ಠಿಕೋನ, ಶಿಸ್ತಿನ ವ್ಯಕ್ತಿತ್ವ, ಸಂವೇದನಾಶೀಲತೆ ಅಷ್ಟೇ, ಪರಿಶ್ರಮ ಶೀಲ ಬದುಕು ಅಶೋಕ ಸುವರ್ಣರದ್ದು. ಈ ಕೃತಿಗಳು ಉತ್ತಮವಾಗಿ ಮೂಡಿಬಂದಿವೆ. ಇದು ಸಾಧಕರಿಂದ ಮಾತ್ರ ಸಾಧ್ಯವಾಗುವುದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಗೋಪಾಲ್ ಕಲ್ಕೋಟಿ ಹೇಳಿದರು.

ಅಶೋಕ ಸುವರ್ಣ ಅವರು ಮಾತನಾಡುತ್ತಾ, ಮುಂಬಯಿ ನಗರದ ಇತಿಹಾಸ ಬೌಗೋಳಿಕ ವಿಶೇಷತೆ, ರಾಜಕೀಯ ಆಡಳಿತದ ಕುರುಹುಗಳು, ಪ್ರಾಚೀನ ಕಟ್ಟಡಗಳು, ಸ್ಮಾರಕಗಳು, ಕಾಲ ಬದಲಾದಂತೆ ಸೇರಿಕೊಂಡ ಬಹು ಸಂಸ್ಕೃತಿಯ ಜನ ಜೀವನ, ಉತ್ಸವ ಸಮಾರಂಭಗಳು, ಭೂಗತ ಜಗತ್ತು, ವ್ಯಾಪಾರ ವ್ಯವಹಾರ, ಆರ್ಥಿಕ ಸ್ಥಿತಿಗತಿಯ ನಿಯಂತ್ರಣ, ಭಾಷಾ ವೈವಿಧ್ಯತೆ ಈ ಅಂಶಗಳಿಂದ ಆಕರ್ಷಿತವಾಗಿರುವ ಮುಂಬಯಿಯನ್ನು ಹಲವು ವರ್ಷಗಳಿಂದ ಸುತ್ತಿದ, ನಡೆದಾಡಿದ, ಪರಿಕ್ರಮಣ ಮಾಡಿದ ನನ್ನ ಅನುಭವವೇ ಈ ಲೇಖನ ಸಂಕಲನ. ಇದು ೧೯೮೫ ರಿಂದ ೨೦೦೦ ವರೆಗಿನ ಮಧ್ಯದ ಅವಧಿಯಲ್ಲಿ ಬರೆದದ್ದು. ಆಗ ವಿಕಿಪೀಡಿಯ ಎಂಬ ವ್ಯವಸ್ಥೆಯು ಲಭ್ಯವಾಗಿರಲಿಲ್ಲ.

ಕೇವಲ ಸಂಶೋಧನೆ, ಶೋಧನೆ ಹಾಗೂ ಗ್ರಂಥಗಳ ಅಧ್ಯಯನದಿಂದ ಮುಂಬಯಿ ಬಗ್ಗೆ ಬರೆಯಲಾಗಿದೆ ಎಂದು ಹೇಳಿದರು. ಅವರು ದಿವಂಗತ ಜೀವಿ ಶೆಟ್ಟಿಗಾರ್, ಹೆಚ್ ಬಿ. ಎಲ್ ರಾವ್ ಅವರನ್ನು ನೆನಪಿಸಿಕೊಂಡರು. ಈ ಕೃತಿಯು ವಿವಿಧ ವಿಷಯಗಳನ್ನು ಒಳಗೊಂಡಿದ್ದು, ಮೊಗವೀರ ಸಮಾಜದ ವಿವಿಧ ಸಂಘಟನೆಗಳು, ಗ್ರಾಮ ಸಂಘಟನೆ, ಮೂಲಸ್ಥಾನಗಳ ವ್ಯವಸ್ಥೆಯ ಬಗ್ಗೆ ಉಲ್ಲೇಖವಿದೆ. ಅವರು ಮುನ್ನುಡಿ ಬರೆದ ಡಾ| ರಘುನಾಥ್ ಹಾಗು ಬೆನ್ನುಡಿ ಬರೆದ ಡಾ| ಜಿ. ಎನ್. ಉಪಾಧ್ಯ ಅವರಿಗೆ ಕೃತಜ್ಞತೆ ಅರ್ಪಿಸಿದರು.

ಅವರ ಮತ್ತೊಂದು ಕೃತಿ ಮುಂಬಯಿ ಪರಿಕ್ರಮಣ ಬಗ್ಗೆ ಮಾತನಾಡುತ್ತ, ದಿವಂಗತ ಹೆಚ್. ಬಿ. ಎಲ್, ರಾಯರ ಆಲೋಚನೆಯಿಂದ ಪ್ರಕಟವಾದ ಈ ಕೃತಿಯ ಹಿನ್ನೆಲೆಯಲ್ಲಿ ಡಾ| ಜಿ. ಎನ್. ಉಪಾಧ್ಯ ಅವರ ಮಾರ್ಗದರ್ಶನವೂ ಸೇರಿಕೊಂಡಿದ್ದು, ಕೃತಿಯನ್ನು ರೋಮಾಂಚನಕಾರಿಯಾಗಿ ಬರೆಯುವಲ್ಲಿ ಗೋಪಾಲ್ ತ್ರಾಸಿಯವರು ತುಂಬಾ ಪಯತ್ನ ಪಟ್ಟಿರುತ್ತಾರೆ. ಓದುಗರಿಗೆ ಉತ್ತಮ ಮಾಹಿತಿ ದೊರೆಯುವಂತೆ ಬರೆದಿದ್ದಾರೆ ಎಂದೆವು ಹೇಳಿದರು.

ಎಂವಿಎಂ ಶಿಕ್ಷಣ ಸಮಿತಿಯ ಕಾರ್ಯಾ ಧ್ಯಕ್ಷ ಸಂಜೀವ ಕೆ.ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಮೊಗವೀರ ಮಂಡಳಿಯ ಗೌ| ಪ್ರ| ಕಾರ್ಯದರ್ಶಿ ಭಾಸ್ಕರ್ ಎಲ್.ಸಾಲ್ಯಾನ್, ಮೊಗವೀರ ಮಾಸಿಕ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮಣ್ ಎಂ. ಶ್ರೀಯಾನ್, ಮೊಗವೀರ ಮಂಡಳಿಯ ಟ್ರಸ್ಟಿ ದೇವರಾಜ್ ಬಂಗೇರ, ಜತೆ ಕಾರ್ಯದರ್ಶಿ ಪ್ರೀತಿ ಹರೀಶ್ ಶ್ರೀಯಾನ್, ಮೊಗವೀರ ಮಂಡಳಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮಲತಾ ಪುತ್ರನ್ ಅವರು ಅತಿಥಿಗಳಿಗೆ ಶಾಲು, ಪುಷ್ಪಗುಚ್ಛ, ಪುಸ್ತಕ ಗೌರವ ನೀಡಿ ಸನ್ಮಾನಿಸಿದರು. ಮೊಗವೀರ ಮಾಸಿಕದ ಮೆನೇಜರ್ ದಯಾನಂದ ಎಲ್. ಬಂಗೇರ ಕೃತಜ್ಞತೆ ಅರ್ಪಿಸಿದರು. ಸಂಘಟಕ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಪರಿಚಯಿಸಿ, ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.
ವರದಿ : ದಿನೇಶ್ ಕುಲಾಲ್ / ಈಶ್ವರ್ ಎಂಐಎಲ್

Comments are closed.