ಕರಾವಳಿ

ಮಾಸ್ಕ್ ಕಾರ್ಯಾಚರಣೆ : ಸ್ವತಹ ಜಿಲ್ಲಾಧಿಕಾರಿಯವರೇ ರಸ್ತೆಗೆ ಇಳಿದು ಮಾಸ್ಕ್ ಧರಿಸುವಂತೆ ಸೂಚನೆ

Pinterest LinkedIn Tumblr

ಮಂಗಳೂರು, ಮಾರ್ಚ್ 22: ಕೊರೋನಾ ಎರಡನೆ ಅಲೆ ವ್ಯಾಪಕವಾಗಿ ವ್ಯಾಪಿಸುತ್ತಿರುವುದರಿಂದ ಕಡ್ಡಯವಾಗಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರೂ ಹೆಚ್ಚಿನವರು ಇನ್ನು ಕೂಡ ಮಾಸ್ಕ್ ಧರಿಸದೆ ಓಡಾಡುತ್ತಿರುವುದರಿಂದ ಮಂಗಳೂರಿನಲ್ಲಿ ಸ್ವತಃ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರೇ ರಸ್ತೆಗೆ ಇಳಿದು ಮಾಸ್ಕ್ ಧರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಘಟನೆ ಇಂದು ನಡೆದಿದೆ.

ಜಿಲ್ಲಾಡಳಿತ ಹಾಗೂ ಮಂಗಳೂರು ಪೊಲೀಸರು ಸೋಮವಾರ ದಿಢೀರ್ ಮಾಸ್ಕ್‌‌ ಡ್ರೈವ್‌‌ ನಡೆಸಿದ್ದಾರೆ. ಕೋವಿಡ್ ಮಾರ್ಗಸೂಚಿಯನ್ವಯ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಈ ಬಗ್ಗೆ ಮಾ.15ರಂದು ದ.ಕ. ಜಿಲ್ಲಾಧಿಕಾರಿ ಪರಿಷ್ಕೃತ ಆದೇಶ ಹೊರಡಿಸಿದ್ದರು. ಆದಾಗ್ಯೂ ಸಾರ್ವಜನಿಕರು ಮಾಸ್ಕ್ ಧರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೇಸತ್ತ ಜಿಲ್ಲಾಧಿಕಾರಿ ಮಂಗಳೂರು ನಗರದಲ್ಲಿ ಕಾರ್ಯಾಚರಣೆ ನಡೆಸಿದರು.

ಪೆಟ್ರೋಲ್‌‌ ಬಂಕ್‌ ಸೇರಿದಂತೆ ಮಾಲ್‌ಗಳು, ಜ್ಯುವೆಲ್ಲರಿ ಶಾಪ್‌, ಖಾಸಗಿ ಬಸ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಡ್ರೈವ್‌ ನಡೆಸಿದ್ದು, ಮಾಸ್ಕ್‌ ಹಾಕುವಂತೆ ಮನವಿ ಮಾಡಿದ್ದಾರೆ.

ಬಸ್ ಪ್ರಯಾಣಿಕರು ಮಾಸ್ಕ್ ಧರಿಸದೇ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಸ್‌ನೊಳಗೆ ಪ್ರವೇಶಿಸಿ ಮಾಸ್ಕ್ ಧರಿಸುವಂತೆ ಸೂಚಿಸಿದರು. ಈ ವೇಳೆ ಮಾಸ್ಕ್ ಧರಿಸದ ಪ್ರಯಾಣಿಕರು ಗಲಿಬಿಲಿಗೊಂಡರು. ಬಸ್ ಪ್ರಯಾಣಿಕರಲ್ಲಿ ಜಿಲ್ಲಾಧಿಕಾರಿಯು ಮಾಸ್ಕ್ ಧರಿಸುವ ಬಗ್ಗೆ ಜನಜಾಗೃತಿ ಮೂಡಿಸಿದರು

ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಡಿಸಿಪಿ ಹರಿರಾಂ ಶಂಕರ್‌ ಅವರ ನೇತೃತ್ವದಲ್ಲಿ ಡ್ರೈ‌ವ್‌ ನಡೆಸಿದ್ದು, ಮಾಸ್ಕ್‌‌ ಹಾಕದವರನ್ನು ಡಿ.ಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಸ್ಕ್‌ ಹಾಕುವಂತೆ ಹೇಳಿದರೂ ಕೇಳದ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೇ ಈ ವೇಳೆ ನಿಯಮ ಉಲ್ಲಂಘಿಸಿದ ಬಸ್‌ಗಳನ್ನು ಸೀಜ್‌ ಮಾಡಿದ್ದು, ಸಿಟಿ ಸೆಂಟರ್‌ ಮಾಲ್‌ನ ಮೂರು ಶಾಪ್‌ಗಳನ್ನು ಬಂದ್‌ ಮಾಡಲು ಆದೇಶಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.