ಕರಾವಳಿ

ತುಳುಚಿತ್ರಗಳಿಗಿರುವ ಚಿತ್ರಮಂದಿರ ಕೊರತೆಯನ್ನು ನೀಗಿಸಿ ತುಳುಚಿತ್ರಗಳ ಬ್ರಾಂಡ್ ಟಾಕೀಸ್ ಆಗಲಿದೆ “ರಮಾಕಾಂತಿ”: ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್

Pinterest LinkedIn Tumblr

ಮಂಗಳೂರು, ಮಾರ್ಚ್.19: ತುಳು ಭಾಷೆಯೇ ಪ್ರಾಧನ್ಯವಿರುವ, ತುಳು ಭಾಷೆ ಮಾತನಾಡುವವರ ಸಂಖ್ಯೆಯೇ ಅತೀ ಹೆಚ್ಚು ಇರುವ ತುಳುನಾಡಿ(ಮಂಗಳೂರು)ನಲ್ಲಿ ತುಳು ಭಾಷೆಯ ಚಿತ್ರಗಳಿಗೆ ಸಿನಿಮಾ ಮಂದಿರಗಳ ಕೊರತೆಯಾಗಿರುವುದು ಚಿಂತಿಸುವ ವಿಚಾರ.

ಒಂದು ಕಾಲದಲ್ಲಿ ಸೆಂಟ್ರಲ್ ಪ್ಲಾಟಿನಂ, ಸುಚಿತ್ರ, ಪ್ರಭಾತ್, ಜ್ಯೋತಿ, ಶ್ರೀನಿವಾಸ್ ಅಮೃತ್, ರೂಪಾವಾಣಿ, ರಮಾಕಾಂತಿ, ನ್ಯೂಚಿತ್ರ ಹೀಗೆ ಹತ್ತಕ್ಕೂ ಹೆಚ್ಚು ಚಿತ್ರಮಂದಿರಗಳು ಕಾರ್ಯನಿರ್ವಾಹಿಸುತ್ತಿತ್ತು. ಆದರೆ ಅಂದು ಕೂಡ ಅತೀ ಹೆಚ್ಚು ತುಳು ಚಿತ್ರಗಳು ಪ್ರದರ್ಶನ ಕಾಣುತಿದ್ದದ್ದು, ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಜ್ಯೋತಿ ಚಿತ್ರಮಂದಿರದಲ್ಲಿ. ಬಳಿಕದ ಸ್ಥಾನ ಸುಚಿತ್ರ ಹಾಗು ಪ್ರಭಾತ್ ಟಾಕೀಸ್‌ಗೆ. ಉಳಿದಂತೆ ರಮಾಕಾಂತಿ ಚಿತ್ರಮಂದಿರದಲ್ಲಿ ಆಗೊಂದು ಈಗೊಂದು ತುಳು ಚಿತ್ರ ಪ್ರದರ್ಶನಗೊಳ್ಳುತ್ತಿದ್ದವು.

ಆದರೆ ಹಲವು ವರ್ಷಗಳಿಂದ ನಗರದಲ್ಲಿದ್ದ ಒಂದೊಂದೇ ಚಿತ್ರಮಂದಿರಗಳು ನಶಿಸುತ್ತ ಬಂದವು. ಥಿಯೇಟರ್ ಗಳಿದ್ದ ಸ್ಥಳಗಳಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣವಾಗಿದೆ.

ಪಾಂಡೇಶ್ವರದಲ್ಲಿದ್ದ ಅಮೃತ ಚಿತ್ರ ಮಂದಿರ, ಫಳ್ನಿರ್ ನಲ್ಲಿದ್ದ ಪ್ಲಾಟಿನಂ, ಸೆಂಟ್ರಲ್ ಟಾಕೀಸ್, ನ್ಯೂಚಿತ್ರ ಮಂದಿರ ಮುಂತಾದವುಗಳು ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿದವು. ಸುಚಿತ್ರ ಹಾಗು ಪ್ರಭಾತ್ ಟಾಕೀಸ್ ಹವಾನಿಯಂತ್ರಿತ (AC)ಗೊಂಡಿದ್ದು, ಇಲ್ಲಿ ಬೇರೆ ಭಾಷೆಯ ಚಿತ್ರಗಳೇ ಹೆಚ್ಚು ಪ್ರದರ್ಶನ ಕಾಣುತಿರುವುದರಿಂದ ತುಳು ಭಾಷೆಯ ಚಿತ್ರಗಳಿಗೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಆದರೆ ಕಳೆದ ವರ್ಷದ ವರೆಗೆ ತುಳು ಚಿತ್ರಕ್ಕೆ ಮನ್ನಣೆ ನೀಡುತ್ತಾ ಬಂದದ್ದು ಜ್ಯೋತಿ ಚಿತ್ರ ಮಂದಿರ ಮಾತ್ರ. ಅತೀ ಹೆಚ್ಚು ತುಳು ಚಿತ್ರಗಳನ್ನು ಪ್ರದರ್ಶಿಸಿದ ಏಕ ಮಾತ್ರ ಚಿತ್ರಮಂದಿರ ಜ್ಯೋತಿ. ಇಲ್ಲಿ ಹಲವು ಚಿತ್ರಗಳು ಶತದಿನ ಹಾಗು ಅದಕ್ಕಿಂತ ಹೆಚ್ಚಿನ ದಿನಗಳ ಪ್ರದರ್ಶನ ಕಂಡಿವೆ.

ಆದರೆ ಇದೀಗ ಜ್ಯೋತಿ ಚಿತ್ರ ಮಂದಿರವಿರುವ ಸ್ಥಳ ಉದ್ಯಮಿಯೊಬ್ಬರಿಗೆ ಮಾರಾಟವಾಗಿರುವುದರಿಂದ ಇಲ್ಲಿ ಚಿತ್ರ ಪ್ರದರ್ಶವನ್ನು ಸ್ಥಗಿತಗೊಳಿಸಲಾಗಿದೆ. ಈ ಮೂಲಕ ತುಳು ಚಿತ್ರಕ್ಕೆ ಥಿಯೇಟರ್ ಕೊರತೆ ಎದುರಾಗಿದೆ.

ಇಂತಹ ಸಂದರ್ಭದಲ್ಲಿ ತುಳು ಭಾಷೆಯ ಚಿತ್ರಕ್ಕೆ ಮಂಗಳೂರಿನಲ್ಲಿ ಒಂದು ನೆಲೆ ಸಿಗಬೇಕು ಎಂಬ ಉದ್ದೇಶ ದಿಂದ ತುಳು-ಕನ್ನಡ ಚಿತ್ರ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿಗಾರ್ ಅವರು, ತಮ್ಮ ಮೊದಲ ತುಳು ಚಿತ್ರವಾದ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಇದನ್ನು ನಗರದ ಕಾರ್‌ಸ್ಟ್ರೀಟ್ ಸಮೀಪದ ರಮಾಕಾಂತಿ ಟಾಕೀಸ್ ನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ರಮಾಕಾಂತಿ ಟಾಕೀಸ್ ನಲ್ಲಿ ಹೆಚ್ಚು ಹೆಚ್ಚು ತುಳು ಚಿತ್ರಗಳು ಪ್ರದರ್ಶನ ಕಾಣುವ ಮೂಲಕ ತುಳು ಭಾಷೆಯ ಚಿತ್ರಗಳಿಗೆ ಇದುವರೆಗೆ ಇದ್ದ ಸಿನಿಮಾ ಮಂದಿರಗಳ ಕೊರತೆಯನ್ನು ದೂರಗೊಳಿಸಲಿದೆ ಎಂಬ ಅಭಿಲಾಷೆಯನ್ನು ಶೇರಿಗಾರ್ ವ್ಯಕ್ತಪಡಿಸಿದ್ದಾರೆ.

ದೂರದ ಮುಂಬೈ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ತುಳು ಚಿತ್ರಗಳಿಗೆ ಥಿಯೇಟರ್ ಗಳಿವೆ, ಆದರೆ ತುಳು ಚಿತ್ರಗಳಿಗೆ ತುಳುನಾಡಿನಲ್ಲಿ ಚಿತ್ರಮಂದಿರಗಳು ಕೊರತೆಯಾಗಿರುವುದು ಬಹಳ ಬೆಸರದ ವಿಚಾರ. ಮುಂದಿನ ದಿನಗಳಲ್ಲಿ ನಮ್ಮ ತುಳು ಚಿತ್ರ ನಿರ್ಮಾಪಕರು ರಮಾಕಾಂತಿಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ರಮಾಕಾಂತಿಯನ್ನು ತುಳು ಚಿತ್ರಗಳ ಬ್ರಾಂಡ್ ಥಿಯೇಟರ್ ನ್ನಾಗಿ ಮಾಡಬೇಕು. ಹಾಗಾದಾಗ ಮಾತ್ರ ತುಳು ಚಿತ್ರಕ್ಕಿರುವ ಚಿತ್ರ ಮಂದಿರದ ಕೊರತೆ ನಿವಾರಣೆಯಾಗಲು ಸಾಧ್ಯ ಎಂದು ಈ ವೇಳೆ ಹರೀಶ್ ಶೇರಿಗಾರ್ ಅಭಿಪ್ರಾಯಪಟ್ಟಿದ್ದಾರೆ.

ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನೆಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ತುಳು‌ ಚಿತ್ರರಂಗದ ಬಹುನಿರೀಕ್ಷೆಯ ಗಿಲ್ಬಿಸ್ಟಿಕ್ ಕಾಮಿಡಿ ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಮಾರ್ಚ್ 26 ರಂದು ಮಂಗಳೂರು-ಉಡುಪಿ-ಬೆಂಗಳೂರು-ಮೈಸೂರು ಸೇರಿದಂತೆ ಕರ್ನಾಟಕ ಹಾಗು ಗಲ್ಫ್ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.

ಮಂಗಳೂರಿನಲ್ಲಿ ರಮಾಕಾಂತಿ ಹಾಗೂ ಇತರ ಮಲ್ಟಿಪ್ಲೆಕ್ಷ್ ಗಳಲ್ಲಿ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಚಿತ್ರ ಏಕಕಾಲದಲ್ಲಿ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಹೆಸರಾಂತ ಚಿತ್ರ ಮಂದಿರವಾದ ರಮಾಕಾಂತಿಯನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗಿದೆ.

ವರದಿ  : ಸತೀಶ್ ಕಾಪಿಕಾಡ್

Comments are closed.