ಕರಾವಳಿ

ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಕಾರ್ಯಾಚರಣೆ: ಗೋ ಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ

Pinterest LinkedIn Tumblr

ಕುಂದಾಪುರ: ಕಾರಿನಲ್ಲಿ‌ ಗೋ ಮಾಂಸ ಸಾಗಿಸುತ್ತಿದ್ದ ಆರೋಪಿಗಳನ್ನು ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ಹಾಗೂ ಸಿಬ್ಬಂದಿಗಳು ಶನಿವಾರ ರಾತ್ರಿ ಬೈಂದೂರು ಸಮೀಪದ ಶಿರೂರು ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ. ಭಟ್ಕಳದ ಶೌಕತ್ ಅಲಿ ಸ್ಟ್ರೀಟ್ ನಿವಾಸಿ ಸೈಯದ್ ಮೊಸ್ಸಿನ್ ಲಂಕಾ (52), ಭಟ್ಕಳದ ಜಾಲಿ ಅಜಾದ್ ನಗರ ನಿವಾಸಿ ಇಷ್ತಿಯಾಕ್ ಅಹಮ್ಮದ್ ಇಕ್ಕೇರಿ (41) ಬಂಧಿತ ಆರೋಪಿಗಳು.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಾ. 13 ಶನಿವಾರದಂದು ಬೈಂದೂರು ಪೊಲೀಸ್‌ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ರೌಂಡ್ಸ್ ಕರ್ತವ್ಯದಲ್ಲಿದ್ದು ರಾತ್ರಿ 9 ಗಂಟೆಯ ಸುಮಾರಿಗೆ ಕಾರೊಂದರಲ್ಲಿ ಮೀನು ತುಂಬುವ ಬಾಕ್ಸ್’ನಲ್ಲಿ ದನದ ಮಾಂಸ ತುಂಬಿಸಿಕೊಂಡು ಭಟ್ಕಳ ಕಡೆಯಿಂದ ಬರುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸಿಬ್ಬಂದಿಗಳ ಸಹಾಯದಿಂದ ಶಿರೂರು ಚೆಕ್‌ಪೋಸ್ಟ ಬಳಿ ರಾತ್ರಿ 9.45 ರ ಹೊತ್ತಿಗೆ ಆ ಇಟಿಯಾಸ್ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದು ವಾಹನದಲ್ಲಿ ಇಬ್ಬರು ವ್ಯಕ್ತಿಗಳಿದ್ದು ಕಾರಿನ ಹಿಂಬಾಗದಲ್ಲಿ 3 ಪ್ಲಾಸ್ಟಿಕ್ ಚೀಲದಲ್ಲಿ ಜಾನುವಾರು ಮಾಂಸ ಇರುವುದು ಕಂಡು ಬಂದಿದೆ. ಕಾರಿನಲ್ಲಿದ್ದವರಲ್ಲಿ ಮಾಂಸದ ಬಗ್ಗೆ ವಿಚಾರಿಸಿದಾಗ ನಾವು ಹಾವೇರಿಯಿಂದ ಖರೀದಿಸಿ ತಂದಿದ್ದು, ಈ ಬಗ್ಗೆ ಯಾವುದಾದರು ದಾಖಲೆ ಇದೆಯೇ ಎಂದು ವಿಚಾರಿಸಿದಾಗ ಯಾವುದೇ ದಾಖಲೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಮಾಂಸವು ಒಂದೊಂದು ಪ್ಲಾಸ್ಟಿಕ್ ಚೀಲದಲ್ಲಿ 5 ಕೆ. ಜಿ ಯ ಪ್ರತ್ಯೇಕ ಪ್ರತ್ಯೇಕವಾಗಿ ತುಂಬಿಸಿದ್ದು ಮತ್ತೊಂದು ಚೀಲದಲ್ಲಿ 50 ಕೆ.ಜಿ ಮಾಂಸವಿದ್ದು 40 ಸಾವಿರ ರೂಪಾಯಿ ಅಂದಾಜು ಮೌಲ್ಯದ ಒಟ್ಟು ಸುಮಾರು 150 ಕೆ.ಜಿ ತೂಕದ ಮಾಂಸ, 5 ಲಕ್ಷ ಮೌಲ್ಯದ ಕಾರು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಹಣ ಮಾಡುವ ಉದ್ದೇಶದಿಂದ ಜಾನುವಾರನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದು ಅಕ್ರಮವಾಗಿ ಜಾನುವಾರು ವಧೆಗೈದು ಮಾಂಸ ಮಾಡಿ ಆ ಮಾಂಸವನ್ನು ಕಾರಿನಲ್ಲಿ ತುಂಬಿಸಿಕೊಂಡು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಮಾರಾಟ ಮಾಡಲು ಸಾಗಿಸುತ್ತಿರುವ‌ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ‌ ಈ ಬಗ್ಗೆ ಪ್ರಕರಣ‌ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.