ಕರಾವಳಿ

ಮಂಗಳೂರಿನಲ್ಲಿ ಗಿಳಿ ಶಾಸ್ತ್ರ ಹೇಳುತ್ತಿದ್ದ ಐವರನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಮಾರ್ಚ್.12: ನಗರದಲ್ಲಿ ಗಿಳಿಗಳ ಮೂಲಕ ಶಾಸ್ತ್ರ ಹೇಳುತ್ತಿದ್ದ ಐವರನ್ನು ವಶಕ್ಕೆ ಪಡೆದುಕೊಂಡಿರುವ ಮಂಗಳೂರಿನ ಅರಣ್ಯಾಧಿಕಾರಿಗಳು ಆರೋಪಿಗಳಿಂದ ಐದು ಗಿಳಿ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರಿನ ಕದ್ರಿ ದೇವಸ್ಥಾನ ಸಮೀಪ ಶಾಸ್ತ್ರ ಹೇಳುವವರು ಕಾಯ್ದೆಗೆ ವಿರುದ್ಧವಾಗಿ ಗಿಳಿಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಸಿಕ್ಕ ಮಾಹಿತಿ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಐವರು ಆರೋಪಿಗಳನ್ನು ಹಾಗೂ ಐದು ಗಿಳಿ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಯಶವಂತಪುರ ನಿವಾಸಿ ಬಸವರಾಜ್, ಪಿಲ್ಲಹಳ್ಳಿ ನಿವಾಸಿಗಳಾದ ರಾಘವೇಂದ್ರ, ದುರ್ಗೇಶ್ ನಾಯ್ಕರ್, ಗೊರಗುಂಟೆಪಾಳ್ಯ ನಿವಾಸಿ ಅಶೋಕ್ ಬೋರ, ಪಿಲ್ಲಹಳ್ಳಿ ನಿವಾಸಿ ಅಣ್ಣಪ್ಪ ಆರ್. ಅವರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಶಾಸ್ತ್ರ ಹೇಳಲು ಅರಣ್ಯದ ಗಿಳಿಗಳನ್ನು ಹಿಡಿದು ಅವುಗಳು ಹಾರಿಹೋಗದಂತೆ ರೆಕ್ಕೆಯ ಗರಿಗಳು ಮತ್ತು ಮೂತಿ ಕತ್ತರಿಸಿ, ಶಾಸ್ತ್ರ ಹೇಳುವ ಸಂದರ್ಭ ಕಾರ್ಡ್ ತೆಗೆಯುವ ಕೆಲಸಕ್ಕೆ ಬಳಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಪ್ರಕಾರ ಈ ರೀತಿ ಹಕ್ಕಿಗಳನ್ನು ಬಳಕೆ ಮಾಡುವುದು ಅಪರಾಧವಾಗಿದೆ. ಕದ್ರಿ ದೇವಸ್ಥಾನದ ಬಳಿ ಗಿಳಿಗಳು ಕಂಡು ಬಂದಿದ್ದು, ಕೂಡಲೇ ಎನ್‌ಇಸಿಎಸ್ ಕಾರ್ಯಕರ್ತರೊಬ್ಬರು ಅರಣ್ಯ ಇಲಾಖೆ ಅಧಿಕಾರಿ ಶ್ರೀಧರ್ ಅವರಿಗೆ ಮಾಹಿತಿ ನೀಡಿದ್ದು, ಅವರ ಸಿಬ್ಬಂದಿ ಮೂಲಕ ಸ್ಥಳಕ್ಕೆ ತೆರಳಿ ಗಿಳಿ ಪೆಟ್ಟಿಗೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಈ ಬಗ್ಗೆ ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.

Comments are closed.