ಕರಾವಳಿ

ಕೊಲ್ಲೂರಿನಲ್ಲಿ ‘ಅಮ್ಮ’ ವಿಶ್ರಾಂತಿಗೃಹ ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ

Pinterest LinkedIn Tumblr

ಕುಂದಾಪುರ: ಸಮಾಜದಿಂದ‌ ಪಡೆದದ್ದು ಸಮಾಜಕ್ಕೆ ಕೊಡಬೇಕು. ಈ ನಿಟ್ಟಿನಲ್ಲಿ ನಾಡೋಜ‌ ಡಾ. ಜಿ ಶಂಕರ್ ಅವರು ವಿಶಿಷ್ಟವಾಗಿದ್ದಾರೆ. ಕೊಲ್ಲೂರು ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತಹ ಅಮ್ಮ ಹೆಸರಿನ ಸುಸಜ್ಜಿತ ವಿಶ್ರಾಂತಿ ಗೃಹ ನಿರ್ಮಿಸಿ ಅದನ್ನು ಸಾರ್ವಜನಿಕ ಸೇವೆಗೆ ಬಿಟ್ಟುಕೊಟ್ಟಿದ್ದಾರೆ. ಕೊಲ್ಲೂರು ತಾಯಿ ಸನ್ನಿಧಿಯಲ್ಲಿ ಇದರ ಉದ್ಘಾಟನೆ ಮಾಡುವ ಭಾಗ್ಯ ನನ್ನ ಜೀವನದ ಸೌಭಾಗ್ಯ ದಿನವಿದು ಎಂದು ಶಿವಮೊಗ್ಗ-ಬೈಂದೂರು ಲೋಕಸಭಾ ಸಂಸದ ಬಿವೈ ರಾಘವೇಂದ್ರ ಹೇಳಿದರು.

ಅವರು ಬುಧವಾದ ಬೆಳ್ಳಿಗ್ಗೆ ಕೊಲ್ಲೂರಿನಲ್ಲಿ ಜಿ. ಶಂಕರ್ ಫ್ಯಾಮಿಲಿ‌ ಟ್ರಸ್ಟ್ ವತಿಯಿಂದ ನಿರ್ಮಿಸಲಾದ “ಅಮ್ಮ” ವಿಶ್ರಾಂತಿ ಗೃಹ ಉದ್ಘಾಟಿಸಿದ ಬಳಿಕ ದೇವಳಕ್ಕೆ ಅದನ್ನು ಹಸ್ತಾಂತರಿಸಿ ಮಾತನಾಡಿದರು.

ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ಯಾವುದೇ ಪ್ರಚಾರ ಬಯಸದೇ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಜಿ ಶಂಕರ್ ಅವರ ಸೇವೆ ನಮಗೆಲ್ಲರಿಗೂ ಮಾದರಿ. ಪ್ರತಿಫಲಾಪೇಕ್ಷೆ ಇಲ್ಲದೇ ತಮ್ಮ ದುಡಿಮೆಯ ಬಹುಪಾಲನ್ನು ಸಾಮಾಜಿಕ‌ ಸೇವೆಗಳಿಗೆ ಮೀಸಲಿಡುವ ಜಿ. ಶಂಕರ್ ಅವರ ಸಮಾಜಮುಖಿ‌ ಕಾರ್ಯ ಅಭಿನಂದನಾರ್ಹವಾಗಿದ್ದು ಅವರಿಂದ ಇನ್ನೂ ಹೆಚ್ಚೆಚ್ಚು ಈ‌ ನಾಡಿಗೆ ಅನೇಕ ಸೇವೆಗಳು ಸಿಗುವಂತಗಾಲಿ ಎಂದು ಹಾರೈಸಿದರು.

ಮೋಗವೀರರು ನಂಬಿಕಸ್ಥರು….
ನಂಬಿಕೆ, ವಿಶ್ವಾಸಕ್ಕೆ ಬಹಳ‌ ಹತ್ತಿರವಾದ ಸಮುದಾಯ ಮೊಗವೀರ ಸಮುದಾಯ. ಸಮುದ್ರದದ ಅಲೆಗಳ ಸವಾಲಿಗೆ ಎದೆಯೊಡ್ಡಿ ಮೀನುಗಾರಿಕೆ ನಡೆಸುವ ಈ ಭಾಗದ ಮೀನುಗಾರರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಮೀನುಗಾರರು ತಮ್ಮ‌ನ್ಯಾಯಯುತ ಬೇಡಿಕೆಯನ್ನು ಸಲ್ಲಿಸಿದ್ದಾರೆ‌. ಅವರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ಮೊಗವೀರ ಭವನ‌ ನಿರ್ಮಾಣಕ್ಕೆ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿಯವರ ಶಿಫಾರಸ್ಸಿನ‌ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಎರಡು ಕೋಟಿ ರೂಪಾಯಿ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ಕೋವಿಡ್ ನಂತಹ ಸಂಕಷ್ಟ ಕಾಲದಲ್ಲಿಯೂ ಮೊಗವೀರರ ಬೇಡಿಕೆ ಸ್ಪಂದಿಸಿದ ಮುಖ್ಯಂತ್ರಿಗಳಿಗೆ ಧನ್ಯವಾದಗಳು ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ನಾಡೋಜ ಜಿ. ಶಂಕರ್ ಅವರು, ದುಡಿಮೆಯಲ್ಲಿ ಬಂದ ಹಣವನ್ನು ಸಮಾಜ ಸೇವೆಗೆ ಮೀಸಲಿರಿಸುತ್ತಿದ್ದೇನೆ. ಅದರಲ್ಲೇ ನನಗೆ ಸಂತೃಪ್ತಿ ಇದೆ. ಸುಸಜ್ಜಿತ ಕಟ್ಟಡ ಹಸ್ತಾಂತರ ಮಾಡಿದ ಬಳಿಕ ಅಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲ. ಇಂತಹ ವಿಚಾರದಲ್ಲಿ ನನಗೆ ಹಲವು ಬಾರಿ ಅನುಭವ ಆಗಿದೆ. ಅಮ್ಮ‌ವಿಶ್ರಾಂತಿ ಗೃಹ ಸ್ವಚ್ಛತೆಗೆ ಗಮನ ಕೊಡಬೇಕು. ಸ್ವಚ್ಛತೆ ಇದ್ದರೆ ಮಾತ್ರ ಯಾತ್ರಾರ್ಥಿಗಳು ಬರುತ್ತಾರೆ ಎಂದರು.

ಅಮ್ಮ ವಿಶ್ರಾಂತಿ ಗೃಹ ಹಸ್ತಾಂತರ ಸಮಾರಂಭದ ಅಧ್ಯಕ್ಷೆತೆಯನ್ನು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್, ಸಹಾಯಕ ಆಯುಕ್ತ ಕೆ. ರಾಜು, ಜಿ.ಪಂ ಸದಸ್ಯ ಶಂಕರ್ ಪೂಜಾರಿ, ಕೊಲ್ಲೂರು ಗ್ರಾಮಪಂಚಾಯತ್ ಅಧ್ಯಕ್ಷ ಶಿವರಾಮ್ ಕೃಷ್ಣ ಭಟ್, ಕೊಲ್ಲೂರು ದೇವಳದ ಅರ್ಚಕ ರಾಮಚಂದ್ರ ಅಡಿಗ, ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್ ಉಪಸ್ಥಿತರಿದ್ದರು.

ಇದೇ ವೇಳೆಯಲ್ಲಿ ಅಮ್ಮ ವಿಶ್ರಾಂತಿಗೃಹದ ಬೀಗದ ಕೀಲಿಯನ್ನು ಜಿಲ್ಲಾಧಿಕಾರಿ‌ ಮೂಲಕವಾಗಿ ಸಹಾಯಕ ಆಯುಕ್ತ ಕೆ. ರಾಜು ಅವರಿಗೆ ಹಸ್ತಾಂತರಿಸಲಾಯಿತು.

ನಾಡೋಜ ಜಿ. ಶಂಕರ್ ಪ್ರಸ್ತಾಪಿಸಿ ಸ್ವಾಗತಿಸಿದರು. ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.