ಮಂಗಳೂರು, ಮಾರ್ಚ್.02: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗು ಉಪಮೇಯರ್ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ ಹಾಗು ಬಿಜೆಪಿ ಯ ಸುಮಂಗಲಾ ರಾವ್ ಉಪಮೇಯರ್ ಆಗಿ ಅಯ್ಕೆಗೊಂಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆಯು ಇಂದು ದಿನಾಂಕ: 02-03-2021 ರಂದು ಮಧ್ಯಾಹ್ನ 1 ಗಂಟೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಿತು.
ಚುನಾವಣಾ ಅಧಿಕಾರಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಎಂ ಜೆ ರೂಪಾ ಮತ್ತು ಮನಪಾ ಅಯುಕ್ತ ಸಂತೋಷ್ ಅವರು ಚುನಾವಣೆ ನಡೆಸಿದರು.
ನೂತನ ಮೇಯರ್ ಆಗಿ ಆಯ್ಕೆಗೊಂಡ ಪ್ರೇಮಾನಂದ ಶೆಟ್ಟಿ ಅವರು ಮಂಗಳಾದೇವಿ ವಾರ್ಡ್‍ನಿಂದ ಸತತ 5ನೇ ಬಾರಿಗೆ ಆಯ್ಕೆಗೊಂಡಿದ್ದಾರೆ. ಉಪ ಮೇಯರ್ ಸುಮಂಗಳಾ ರಾವ್ ಅವರು ಕುಂಜತ್ತಬೈಲ್ ದಕ್ಷಿಣ ವಾರ್ಡ್‌ನಿಂದ ಎರಡನೇ ಬಾರಿ ಆಯ್ಕೆಗೊಂಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಈ ಬಾರಿಯ ಮೇಯರ್/ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲಾಗಿತ್ತು. ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗ ಮತ್ತು ಉಪ ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿತ್ತು
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ 46 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಅನಿಲ್ ಕುಮಾರ್ ಅವರು 14 ಪಡೆದರು. ಅತೀ ಹೆಚ್ಚು ಮತಪಡೆದ ಪ್ರೇಮಾನಂದ ಶೆಟ್ಟಿ ಅವರನ್ನು ಮೇಯರ್ ಎಂದು ಘೋಷಿಸಲಾಯಿತು.
ಇನ್ನು ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜೆಸಿಂತಾ ಅಲ್ಫ್ರೆಡ್ ಅವರು14 ಪಡೆದರೆ ಬಿಜೆಪಿ ಯ ಸುಮಂಗಲಾ ರಾವ್ ಅವರು 46 ಮತಗಳನ್ನು ಪಡೆಯುವ ಮೂಲಕ ಉಪ ಮೇಯರ್ ಆಗಿ ಅಯ್ಕೆಗೊಂಡರು.
ಮಂಗಳೂರು ಶಾಸಕ ವೇದವ್ಯಾಸ ಕಾಮಾತ್, ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಹಾಗು ಎಂ ಎಲ್ಸಿ ಬಿ ಎಂ ಫಾರೂಕ್ ಗೈರು ಹಾಜರಾಗಿದ್ದರು. ಇಬ್ಬರು ಎಸ್‌ಡಿಪಿಐ ಕಾರ್ಪೊರೇಟರ್‌ಗಳು ತಟಸ್ಥರಾಗಿದ್ದರು.
ಹಿಂದಿನ ಮೇಯರ್ ಆಗಿ ದಿವಾಕರ್ ಪಾಂಡೇಶ್ವರ, ಉಪ ಮೇಯರ್ ಆಗಿ ವೇದಾವತಿ ಅವರು 2020ರ ಫೆ. 28ರಂದು ಆಯ್ಕೆಯಾಗಿದ್ದರು. ಈ ವರ್ಷ ಫೆ. 28ಕ್ಕೆ ಅವರ ಅವಧಿ ಮುಕ್ತಾಯಗೊಂಡಿತು. ಮಂಗಳೂರು ಪಾಲಿಕೆ ಚುನಾವಣೆಯು 2019ರ ನ. 12ರಂದು ನಡೆದು, ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ 2 ಸ್ಥಾನ ಪಡೆದಿತ್ತು.