ಮಂಗಳೂರು, ಮಾರ್ಚ್.01: ಮಂಗಳೂರು ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆಯು ದಿನಾಂಕ: 02-03-2021 ರಂದು ಮಧ್ಯಾಹ್ನ 1 ಗಂಟೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.
ಚುನಾವಣೆ ನಡೆಯುವ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭದಿಂದ ಮುಕ್ತಾಯವಾಗುವವರೆಗೆ ಯಾವುದೇ ಛಾಯಾ ಚಿತ್ರಣ ಮತ್ತು ವೀಡಿಯೋ ಚಿತ್ರೀಕರಣ ಮಾಡದಂತೆ ಮಹಾನಗರಪಾಲಿಕೆ ಆಯುಕ್ತರು ಸೂಚಿಸಿರುತ್ತಾರೆ.
ಮೇಯರ್ ಸಾಮಾನ್ಯ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ :
ಮಂಗಳೂರು ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್-ಉಪಮೇಯರ್ ಚುನಾವಣೆಗೆ ದಿನ ನಿಗದಿಯಾಗಿದ್ದು, ಜೊತೆಗೆ ಈಗಾಗಲೇ ಮೇಯರ್/ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಕೂಡ ಪ್ರಕಟವಾಗಿದೆ.
ಹಾಲಿ ಮೇಯರ್ ದಿವಾಕರ್ ಪಾಂಡೇಶ್ವರ ಅವರ ಅಧಿಕಾರಾವಧಿ ಫೆ. 28ರಂದು ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ನೂತನ ಮೇಯರ್ ಆಯ್ಕೆ ಮಾರ್ಚ್ 2ರಂದು ನಿಗದಿಯಾಗಿದೆ.
ಪಾಲಿಕೆಯಲ್ಲಿ 33ನೇ ಅವಧಿಯ ಮೇಯರ್/ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಈಗಾಗಲೇ ಪ್ರಕಟಗೊಂಡಿದ್ದು, ಮೇಯರ್ ಸಾಮಾನ್ಯ ಮತ್ತು ಉಪ ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ.
ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಹಿರಿಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ ಸುಧೀರ್ ಶೆಟ್ಟಿ ಕಣ್ಣೂರು ಸಹಿತಾ ಹಲವರ ಹೆಸರು ಕೇಳಿ ಬಂದಿದ್ದು, ಪ್ರಸ್ತುತ ಆಡಳಿತ ಪಕ್ಷದ ಮುಖ್ಯ ಸಚೇತಕ, ಅತ್ಯಂತ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಅವರ ಹೆಸರು ಮೇಯರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ಮಂಗಳೂರು ಪಾಲಿಕೆ ಚುನಾವಣೆಯು 2019ರ ನ. 12ರಂದು ನಡೆದು, ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ 2 ಸ್ಥಾನ ಪಡೆದಿತ್ತು. ಆದರೆ ಈ ವೇಳೆ ಮೇಯರ್-ಉಪಮೇಯರ್ ಮೀಸಲಾತಿ ವಿಚಾರದಲ್ಲಿ ಮೂಡಿದ್ದ ಗೊಂದಲದಿಂದಾಗಿ 3 ತಿಂಗಳವರೆಗೆ ಪಾಲಿಕೆ ಸದಸ್ಯರಿಗೆ ಅಧಿಕಾರ ದೊರೆತಿರಲಿಲ್ಲ.
32ನೇ ಮೇಯರ್ ಆಗಿ ದಿವಾಕರ್ ಪಾಂಡೇಶ್ವರ, ಉಪ ಮೇಯರ್ ಆಗಿ ವೇದಾವತಿ ಅವರು 2020ರ ಫೆ. 28ರಂದು ಆಯ್ಕೆಯಾಗಿದ್ದರು. ಈ ವರ್ಷ ಫೆ. 28ಕ್ಕೆ ಅವರ ಅವಧಿ ಮುಕ್ತಾಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ನೂತನ ಮೇಯರ್/ಉಪ ಮೇಯರ್ ಆಯ್ಕೆ ಮಾರ್ಚ್ 2ರಂದು ನಡೆಸಲು ತೀರ್ಮಾನಿಸಲಾಗಿದೆ.