ಮಂಗಳೂರು, ಫೆಬ್ರವರಿ.26 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕುಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ವಿಶ್ವ ಹಿಂದು ಪರಿಷದ್ ತಿಳಿಸಿದೆ. ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕುಕೃತ್ಯ ನಿರಂತರವಾಗಿ ನಡೆಯುತ್ತಿದ್ದು, ಪೊಲೀಸ್ ಇಲಾಖೆಯ ವೈಫಲ್ಯದ ಕಾರಣದಿಂದ ಇದು ಮುಂದುವರಿಯುತ್ತಿದೆ.
ಉರ್ವಾಸ್ಟೋರ್ ಸಮೀಪದ ದಡ್ಡಲ್ ಕಾಡ್ ನಲ್ಲಿ ಇಂತಹ ಹೇಯ ಕೃತ್ಯ ಮತ್ತೊಮ್ಮೆ ಮರುಕಳಿಸಿದ್ದು, ದುಷ್ಕರ್ಮಿಗಳು ದಡ್ಡಲ್ ಕಾಡ್‌ನ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯನ್ನು ಅಪವಿತ್ರಗೊಳಿಸಿ ಹಿಂದೂಧರ್ಮ ನಿಂದನೆಯ ಬರಹಗಳನ್ನು ಹಾಕಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ಧಕ್ಕೆಗೊಳಿಸಿದ್ದಾರೆ,
ಈ ರಾಕ್ಷಸೀಯ ಕೃತ್ಯವನ್ನು ವಿಶ್ವ ಹಿಂದು ಪರಿಷದ್ ತೀವ್ರವಾಗಿ ಖಂಡಿಸುತ್ತದೆ ಮತ್ತು ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಲು ಆಗ್ರಹಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಗೋಪಾಲ್ ಕುತ್ತಾರ್ ತಿಳಿಸಿದ್ದಾರೆ.