ಕರಾವಳಿ

ಹಳೆಯ ದೋಣಿಗಳ ಮರುಬಳಕೆಯಿಂದ ಮೀನುಗಾರರಿಗೆ ಹಣಕಾಸಿನ ಸಹಾಯವಾಗುತ್ತದೆ : ಸಚಿವ ಅಂಗಾರ ಎಸ್.

Pinterest LinkedIn Tumblr

ಮಂಗಳೂರು, ಫೆಬ್ರವರಿ 24 : ಹಳೆಯ ದೋಣಿಗಳನ್ನು ಖರೀದಿಸಿ ನವೀಕರಿಸಿ ಬಳಸುವುದರಿಂದ ಮೀನುಗಾರರಿಗೆ ಹಣಕಾಸಿನ ಸಹಾಯವಾಗುತ್ತದೆ ಜೊತೆಗೆ ನಗರದ ಸೌಂದರ್ಯ ಹಾಗೂ ಸ್ವಚ್ಚತೆಗೂ ಸಹಕಾರಿಯಾಗುತ್ತದೆ ಎಂದು ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಅಂಗಾರ ಎಸ್. ಹೇಳಿದರು.

ಅವರು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಮೀನುಗಾರಿಕಾ ಕಾಲೇಜು ಹಾಗೂ ಕ್ಯಾಂಟಿನ್ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಮೀನುಗಾರರಹಳೆಯ ದೋಣಿಗಳನ್ನು ದುರಸ್ಥಿಗೊಳಿಸಿ, ಸಾರ್ವಜನಿಕರಿಗೆ ವಸ್ತು ಪ್ರದರ್ಶನಕ್ಕೆ ಇಡುವ ವ್ಯವಸ್ಥೆಯನ್ನು ಮಾಡಲಾಗಿದೆ. ದಿನದಿಂದ ದಿನಕ್ಕೆ ಸಾಂಸ್ಕೃತಿಕ ಆಚಾರ-ವಿಚಾರಗಳು ನಶಿಸಿ ಹೋಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಮೀನುಗಾರಿಕೆ ಕಲೆಯ ಬಗ್ಗೆ ಜನರಿಗೆ ಇನ್ನಷ್ಟು ಮಾಹಿತಿ ತಲುಪಲು ಹಳೆ ದೋಣಿಗಳ ಪ್ರದರ್ಶನವು ಸಹಕಾರಿಯಾಗಲಿದೆ ಎಂದರು.

ದುರಸ್ಥಿಗೊಳಿಸಿದ ದೋಣಿಗಳ ಪ್ರದರ್ಶನದಲ್ಲಿ ಅದು ಸಾಮಾನ್ಯ ಎಂಬಂತೆ ಕಂಡರೂ ಆ ದೋಣಿಯ ಹಿಂದೆ ಮೀನುಗಾರರ ಪರಿಶ್ರಮ, ಸಾಹಸ ಮತ್ತು ಭಾವನೆಗಳು ಎತ್ತಿ ಕಾಣುತ್ತವೆ ಇದಕ್ಕಾಗಿ ಸರಕಾರವನ್ನು ನಾವು ಹೆಚ್ಚು ಪ್ರೋತ್ಸಾಹಿಸಬೇಕು ಎಂದ ಅವರು ಕರಾವಳಿ ಪ್ರದೇಶದಲ್ಲಿ ಇರುವ ಇಂತಹ ದೋಣಿಗಳನ್ನು ಕಡಿಮೆ ಖರ್ಚಿನಲ್ಲಿ ರಿಪೇರಿ ಮಾಡಿಸಿ ಮತ್ತು ಅಲಂಕರಿಸಿ ಶಾಲೆ ಉದ್ಯಾನವನ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಇಟ್ಟರೆ ಜನರಿಗೆ ದೋಣಿಗಳನ್ನು ನೋಡುವುದಕ್ಕೆ ಅವಕಾಶ ಸಿಗುತ್ತದೆ ಎಂದರು.

ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳನ್ನು ಕೃಷಿ ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಆಕರ್ಷಿಸುವುದಕ್ಕೆ ಸಹಕಾರಿಯಾಗಿದೆ ಅಲ್ಲದೇ,ಇಂತಹ ವಿಷಯಗಳಲ್ಲಿ ಪದವಿ ಪಡೆದು ವೃತ್ತಿಯನ್ನು ಪ್ರಾರಂಭಿಸಲು ಪ್ರೇರೇಪಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ದೊಡ್ಮಣಿ, ಕೆ.ಎಫ್.ಡಿ.ಸಿ ಅಧ್ಯಕ್ಷ ನಿತಿನ್ ಕುಮಾರ್, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.