ಮಂಗಳೂರು : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾನುವಾರ ರಾತ್ರಿ ನಾಥ ಪಂಥದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿರುವ ಮಂಗಳೂರು ಕದ್ರಿಯಲ್ಲಿರುವ ಕದಲೀ ಶ್ರೀ ಯೋಗೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀ ರಾಜ ಯೋಗಿ ನಿರ್ಮಲನಾಥಜಿ ಮಹಾರಾಜ್ ಜತೆ ಮಾತುಕತೆ ನಡೆಸಿದರು.
ಭಾನುವಾರ ಕಾಸರಗೋಡು ತಾಲಿಪಡ್ಪು ಮೈದಾನದಲ್ಲಿ ಅಯೋಜಿಸಲಾಗಿದ್ದ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆ ಮುಗಿಸಿ ಹಿಂದಿರುಗುವ ಸಂದರ್ಭ ಅವರು ಕದ್ರಿಯ ಜೋಗಿ ಮಠಕ್ಕೆ ಖಾಸಗಿ ಭೇಟಿ ನೀಡಿದರು.
ಈ ಸಂದರ್ಭ ಜೋಗಿ ಮಠದಲ್ಲಿ ಬಾಲಾಲಯದಲ್ಲಿರುವ ಶ್ರೀ ಕಾಲಭೈರವ ಸ್ವಾಮಿಗೆ ಪೂಜೆ ಸಲ್ಲಿಸಿದ ಯೋಗಿ ಆದಿತ್ಯನಾಥ ಅವರು, ಶಿವನ ಪೂಜೆ ನೆರವೇರಿಸಿ ಬಳಿಕ ಮಠದ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದರು. ಮಠದ ಆವರಣದಲ್ಲಿ ನಿರ್ಮಿಸಿರುವ ಸಭಾಭವನ ಮತ್ತು ಅನ್ನಛತ್ರವನ್ನು ಯೋಗಿ ಆದಿತ್ಯನಾಥ ಅವರು ಈ ಸಂದರ್ಭ ಉದ್ಘಾಟಿಸಿದರು.
ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿರುವ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕುರಿತು ಮಾತುಕತೆ ನಡೆಸಿದರು. ಇದೇ ವೇಳೆ ಮಠದಲ್ಲಿ ಮುಂದೆ ನಡೆಯುವ ದೇವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವಂತೆ ಯೋಗಿ ಅವರಿಗೆ ಆಮಂತ್ರಣ ನೀಡಲಾಯಿತು.
ಮಠದಲ್ಲಿ ಚಪಾತಿ, ಅನ್ನ, ಹಣ್ಣು ಹಂಪಲು ಸಹಿತ ಭೋಜನ ಸ್ವೀಕಾರ ಮಾಡಿ, ಬಳಿಕ ಮಂಗಳೂರು ವಿಮಾನ ನಿಲ್ದಾಣ ಮೂಲಕ ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ತೆರಳಿದರು. ಜೋಗಿ ಮಠಕ್ಕೆ ಖಾಸಗಿ ಭೇಟಿಯಾದ ಕಾರಣ ಪಾಸ್ ಇದ್ದವರನ್ನು ಮಾತ್ರ ಮಠದ ಆವರಣಕ್ಕೆ ಬಿಡಲಾಗಿತ್ತು. ಪೊಲೀಸರು ಬಿಗು ಬಂದೋಬಸ್ತ್ ನಡೆಸಿದ್ದರು.
ಆದಿತ್ಯನಾಥ ಅವರ ಭೇಟಿ ಬಗ್ಗೆ ಮಾಹಿತಿ ನೀಡಿದ ಶಾಸಕ ಡಿ. ವೇದವ್ಯಾಸ ಕಾಮತ್, ಯೋಗಿ ಆದಿತ್ಯನಾಥ ಅವರು ಕಾಸರಗೋಡಿನಲ್ಲಿ ಬಿಜೆಪಿ ಕಾರ್ಯಕ್ರಮಕ್ಕೆ ಆಗಮಿಸಿದವರು ಜೋಗಿ ಮಠಕ್ಕೂ ಭೇಟಿ ನೀಡಿದ್ದಾರೆ. ಮಠದ ಜೀರ್ಣೋದ್ಧಾರ ಕಾರ್ಯ ಬಗ್ಗೆ ಮಾಹಿತಿ ಪಡೆದು, ಮಾರ್ಗದರ್ಶನ ನೀಡಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಗ್ಗೆ ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿಗಳಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಜತೆ ಮಾತುಕತೆ ನಡೆಸಿದರು ಎಂದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕಾರ್ಪೊರೇಟರ್ಗಳಾದ ಶಕಿಲಾ ಕಾವ ಮತ್ತು ಮನೋಹರ ಶೆಟ್ಟಿ, ಮಠದ ಅಭಿಮಾನಿಗಳಾದ ಅಜಯ್ ಕುಮಾರ್, ವಾಸುದೇವ ಡಿ.ಕಾಮತ್, ಎಚ್.ಕೆ.ಪುರುಷೋತ್ತಮ, ಎಆರ್ಟಿಒ ಗಂಗಾಧರ್, ಕಿರಣ್ ಕುಮಾರ್ ಜೋಗಿ ಮತ್ತಿತರರಿದ್ದರು.