ಮಂಗಳೂರು: ಕರಾವಳಿಯ ಜನಪದ ಕ್ರೀಡೆ ಕಂಬಳದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಬೈಂದೂರಿನ ವಿಶ್ವನಾಥ್ ದೇವಾಡಿಗ ಅವರನ್ನು ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಮಂಗಳೂರಿನ ಕಿನ್ನಿಗೋಳಿ ಸಮೀಪದ ಐಕಳದಲ್ಲಿ ನಡೆದ ಕಂಬಳದಲ್ಲಿ ಬೈಂದೂರಿನ ವಿಶ್ವನಾಥ್ ದೇವಾಡಿಗ (23) ಅವರು ಓಡಿಸಿದ ಕೋಣಗಳು 9.15 ಸೆಕೆಂಡ್ಗಳಲ್ಲಿ 100 ಮೀಟರ್ ಓಡಿ ಹೊಸ ದಾಖಲೆ ನಿರ್ಮಿಸಿದೆ.
ಕಂಬಳದ ಉಸೇನ್ ಬೋಲ್ಟ್ ಎಂದು ಖ್ಯಾತರಾಗಿದ್ದ ಶ್ರೀನಿವಾಸ್ ಗೌಡರು ಕಳೆದ ವರ್ಷ 9.55 ಸೆಕೆಂಡ್ನಲ್ಲಿ ದಾಖಲೆ ಮಾಡಿದ್ದರು. ಈ ಬಾರಿ ವಿಶ್ವನಾಥ್, ಶ್ರೀನಿವಾಸ ಗೌಡರ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಈ ವೇಳೆ ಮಾತನಾಡಿದ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರು, ಕಂಬಳದ ಗದ್ದೆಯಲ್ಲಿ ಓಡುವ ಓಟಗಾರರಿಗೆ ಸೂಕ್ತ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವರನ್ನು ಗೌರವಿಸಲಾಗುತ್ತಿದೆ. ಕಂಬಳ ಕ್ರೀಡೆಗೂ ಪ್ರೋತ್ಸಾಹ ನೀಡಲಾಗುತ್ತಿದ್ದು, ಅವರು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭಕೋರಿದರು.
ಕಂಬಳ ಕ್ರೀಡಾ ಅಕಾಡೆಮಿ ಅಧ್ಯಕ್ಷ ಗುಣಪಾಲ ಕದಂಬ ಅವರು ಮಾತನಾಡಿ, ಕಂಬಳ ಗದ್ದೆಯಲ್ಲಿ ವಿಶ್ವನಾಥ ದೇವಾಡಿಗ (9.15 ಸೆ. ನೂರು ಮೀ.ಓಟ) ಮತ್ತು ಶ್ರೀನಿವಾಸ ದೇವಾಡಿಗ (9.31 ಸೆ.) ದಾಖಲೆ ನಿರ್ಮಿಸಿದ್ದಾರೆ. ರಾಜ್ಯ ಕ್ರೀಡಾ ಪ್ರಾಧಿಕಾರದ ಮೂಲಕ ಕ್ರೀಡಾರತ್ನ ಪ್ರಶಸ್ತಿಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಭಿನಂಧನೆ ಸ್ವೀಕರಿಸಿ ಮಾತನಾಡಿದ ವಿಶ್ವನಾಥ್ ದೇವಾಡಿಗ ಅವರು, ಮೊದಲಿಗೆ ಈ ದಾಖಲೆ ನಿರ್ಮಿಸಲು ನನ್ನ ಜೊತೆಗಿದ್ದು ನನಗೆ ಸಹಕಾರ ನೀಡಿದವರಿಗೆ ನಾನು ಕೃತಜ್ಞತೆ ಹೇಳುತ್ತೇನೆ ಎಂದು ಹೇಳಿದರು.
ಚಿಕ್ಕವನಿದ್ದಾಗಿನಿಂದಲೂ ನಾನು ಕಂಬಳವನ್ನು ನೋಡುತ್ತಿದ್ದೆ. 2013ರಲ್ಲಿ ನಡೆದಿದ್ದ ಸ್ಪರ್ಧೆ ನನಗೆ ಪ್ರೇರಣೆ ನೀಡಿತ್ತು. ಎಸ್‌ಎಸ್‌ಎಲ್’ಸಿ ಮುಗಿದ ಬಳಿಕ ಮುಂಬೈ ಕ್ಯಾಂಟೀನ್ ವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಸಿಟಿ ಜೀವನಶೈಲಿ ನನಗೆ ಇಷ್ಟವಿಲ್ಲ. ನನ್ನ ಪೋಷಕರು ಮತ್ತು ಒಡಹುಟ್ಟಿದವರಂತೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದುಕೊಂಡಿದ್ದೇನೆ. ಮನೆಗೆ ಬಂದಾಗಲೆಲ್ಲಾ ಕೋಣಗಳನ್ನು ಬೆಳೆಸಲು ಆರಂಭಿಸಿದ್ದೆ. ಕಳೆದ 7 ವರ್ಷಗಳಿಂದ ನಾನು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆಂದು ಹೇಳಿದರು.
ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟಪುಷ್ಟವಾಗಿ ಆರೈಕೆ ಮಾಡಿ ಸಾಕಿ, ಬೆಳೆಸಿದ ಕೋಣವನ್ನು ಕ್ರೀಡೆಗಾಗಿ ಸಿದ್ಧಗೊಳಿಸಿರುತ್ತಾರೆ. ಈ ಕೋಣಗಳನ್ನು ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಹಗಲಿರುಳು ದುಡಿದ ರೈತರು ಮನರಂಜನೆಗಾಗಿ ಮೊದಲಿಗೆ ಪ್ರಾರಂಭಿಸಿದ ಸ್ಪರ್ಧೆ ಇದು. ನಂತರ ಜಾನಪದ ಕ್ರೀಡೆಯಾಗಿ ಜನಪ್ರಿಯವಾಗಿದೆ. ಸ್ಪರ್ಧೆಯಲ್ಲಿ ಓಡುವ ಕೋಣಗಳ ಜೊತೆಗೆ ಓಡಿಸುವ ಸಾರಥಿಯ ಪಾತ್ರವೂ ಮಹತ್ವದ್ದಾಗಿದೆ.
ಕಾರ್ಯಕ್ರಮದಲ್ಲಿ ಕಂಬಳ ಸಮಿತಿಯ ಸಂಘಟಕರಾದ ಬಿ.ಆರ್.ಶೆಟ್ಟಿ, ಸಂತೋಷ್ ಶೆಟ್ಟಿ ಬೋಳಗುತ್ತು, ವೆಂಕಟ ಪೂಜಾರಿ, ವಿಜಯ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್, ಹಾಲು ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ ಮುಂತಾದವರು ಉಪಸ್ಥಿತರಿದ್ದರು.