ಕರಾವಳಿ

ತುಳು ಚಿತ್ರ ನಿರ್ದೇಶಕರಿಗೆ ಹಣ ವಂಚನೆ ಪ್ರಕರಣ : ಮಂಗಳೂರು ಕೋರ್ಟ್‌ನಿಂದ ಜಾಮೀನು ಪಡೆದ ಹಿರಿಯ ನಟಿ ಪದ್ಮಜಾ ರಾವ್‌

Pinterest LinkedIn Tumblr

ಮಂಗಳೂರು, ಫೆಬ್ರವರಿ12: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಪದ್ಮಜಾ ರಾವ್‌ ಅವರಿಗೆ ಮಂಗಳೂರಿನ ಜೆಎಂಎಫ್‌ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ನೀಡಿದ ಬೆನ್ನಲ್ಲೇ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿ ಮಂಗಳೂರಿನ ನ್ಯಾಯಾಲಯದಲ್ಲೇ ಜಾಮೀನು ಪಡೆದಿದ್ದಾರೆ.

ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ 40 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಈ ವಾರಂಟ್ ನೀಡಲಾಗಿತ್ತು. ಕನ್ನಡದ ಚಿತ್ರರಂಗದ ನಟಿ ಪದ್ಮಾಜಾ ರಾವ್ ಅವರ ವಿರುದ್ಧ ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರು ಮಂಗಳೂರಿನ ಕೋರ್ಟ್‌ನಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು.

ಎರಡು ವರ್ಷಗಳ ಹಿಂದೆ ಪದ್ಮಜಾ ರಾವ್ ತಮ್ಮ ತುಳು ಚಿತ್ರದಲ್ಲಿ ನಟಿಸುತ್ತಿದ್ದಾಗ, ಆ ಸಿನೆಮಾದ ನಿರ್ದೇಶಕ ವೀರೇಂದ್ರ ಶೆಟ್ಟಿಯಿಂದ ಹಂತ ಹಂತವಾಗಿ 40 ಲಕ್ಷ ರೂ. ಪಡೆದು, ವಾಪಸ್ ನೀಡಿರಲಿಲ್ಲ ಎಂದು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಒಂದು ಲಕ್ಷ ರೂ. ಮಾತ್ರ ನಗದು ರೂಪದಲ್ಲಿ ಕೊಟ್ಟಿದ್ದು, ಉಳಿದೆಲ್ಲವನ್ನು ಚೆಕ್ ರೂಪದಲ್ಲಿ ನೀಡಲಾಗಿದೆ. ಸಂಸ್ಥೆಯ ಹೆಸರಲ್ಲೇ ಸಾಲ ನೀಡಿದ್ದೆ. ಅದರ ಎಲ್ಲ ದಾಖಲೆಗಳು ನಮ್ಮಲ್ಲಿ ಇವೆ. 2020ರ ಸೆಪ್ಟಂಬರ್‌ನಲ್ಲಿ ಚೆಕ್‌ಬೌನ್ಸ್ ಕೇಸು ದಾಖಲು ಮಾಡಿದ್ದು, ನೋಟಿಸ್ ಹೋಗಿತ್ತು. ನೋಟಿಸ್‌ಗೆ ಉತ್ತರ ನೀಡದ ಕಾರಣ ಪ್ರಕರಣ ಮತ್ತೆ ನವೆಂಬರ್‌ನಲ್ಲಿ ವಿಚಾರಣೆಗೆ ಬಂದಿತ್ತು. ಆಗಲೂ ನಟಿ ಪ್ರತಿಕ್ರಿಯಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಪದ್ಮಜಾ ರಾವ್ ಅವರನ್ನು ಬಂಧಿಸಿ ಕರೆ ತರುವಂತೆ ಮಂಗಳೂರಿನ ನ್ಯಾಯಾಲಯ ಬೆಂಗಳೂರಿನ ತಲಘಟ್ಟಪುರ ಪೊಲೀಸರ ಮೂಲಕ ವಾರಂಟ್ ಜಾರಿ ಮಾಡಿತ್ತು. ಅದರಂತೆ ಪೊಲೀಸರು ಅವರನ್ನು ಬಂಧಿಸಿ ಮಾ.8ರಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ ಪದ್ಮಜಾ ವಾರಂಟ್ ಆದೇಶದ ಪ್ರತಿ ಸಿಗುತ್ತಿದ್ದಂತೆ ತಮ್ಮ ವಕೀಲರ ಮೂಲಕ ಮಂಗಳೂರಿನ 5ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿ, ಬಾಂಡ್ ಆಧಾರದಲ್ಲಿ ಜಾಮೀನು ಪಡೆದಿದ್ದಾರೆ.

ಕೋರ್ಟ್ ನಿಂದ ಹೊರ ಬಂದ ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಪದ್ಮಜಾ ರಾವ್ ಅವರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನನ್ನ ಮೇಲೆಯೂ ನನಗೆ ಭರವಸೆ ಇದೆ. ಹಾಗಾಗಿ ಈ ಪ್ರಕರಣದಲ್ಲಿ ಗೆದ್ದೇ ಗೆಲ್ಲುತ್ತೇನೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚೇನು ಹೇಳುವಂತಿಲ್ಲ’ ಎಂದು ಹೇಳಿದರು.

Comments are closed.