ಕರಾವಳಿ

ರ್‍ಯಾಗಿಂಗ್ ಪ್ರಕರಣದಲ್ಲಿ ಬಂಧಿತರಾದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್

Pinterest LinkedIn Tumblr

ಮಂಗಳೂರು, ಫೆಬ್ರವರಿ. 12: ನಗರ ಹೊರವಲಯದ ಖಾಸಗಿ ಕಾಲೇಜಿವೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡುತ್ತಿದ್ದ ಆರೋಪದಡಿ ಈಗಾಗಲೇ 11 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ನಗರ ಹೊರವಲಯದ ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡುತ್ತಿದ್ದ ಆರೋಪದಡಿ 11 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತರನ್ನು ಮೊಹಮ್ಮದ್ ಶಮಾಸ್, ಅವಿನ್ ಜೋಯ್, ರಾಬಿನ್ ಬಿಜು, ಜೆರಾನ್ ಸಿರಿಲ್, ಜಬಿನ್ ಮಹರೂಫ್, ಮೊಹಮ್ಮದ್ ಸೂರಜ್, ಜಫಿನ್, ಅಬ್ದುಲ್ ಬಸಿತ್, ಆಶಿನ್ ಬಾಬು, ಅಬ್ದುಲ್ ಅನಾಸ್ ಮೊಹಮ್ಮದ್, ಅಕ್ಷಯ್ ಕೆ.ಎಸ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕೇರಳ ಮೂಲದವರಾಗಿದ್ದಾರೆ.

ಕಾಲೇಜಿನ ಫಿಸಿಯೋಥೆರಪಿ ಮತ್ತು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದ ಐವರು ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿದ್ದು, ಗಡ್ಡ- ಮೀಸೆ ಬೋಳಿಸಬೇಕು, ಪೊಟ್ಟಣದಲ್ಲಿರುವ ಬೆಂಕಿ ಕಡ್ಡಿಗಳನ್ನು ಎಣಿಸಬೇಕು ಎಂದು ಕಿರುಕುಳ ನೀಡಿದ್ದು, ದೈಹಿಕವಾಗಿ ಕೂಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ರ್‍ಯಾಗಿಂಗ್ ಪ್ರಕರಣದಲ್ಲಿ ಭಾಗಿಯಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಮುಲಾಜಿಲ್ಲದೆ ಅಂತಹವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು.

ಕಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್ ಗೆ ಒಳಗಾದ ಸಂದರ್ಭದಲ್ಲಿ ಸಂಬಂಧಿಸಿದವರ ಗಮನಕ್ಕೆ ತರಬೇಕು. ಬೆದರಿಕೆ ಹಾಕಿದ್ದಲ್ಲಿ ಹೆದರಿಕೊಂಡು ಸುಮ್ಮನಿರಬೇಡಿ. ಸಂಬಂಧಿಸಿದವರಿಗೆ ಮಾಹಿತಿ ನೀಡಿ. ತಕ್ಷಣ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ಕಮಿಷನರ್ ಶಶಿಕುಮಾರ್ ಎಚ್ಚರಿಕೆಯನ್ನು ನೀಡಿದ್ದಾರೆ.

Comments are closed.