ಕರಾವಳಿ

ಬಿಲ್ಲವರ ಅವಹೇಳನೆ ಆರೋಪ: ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

Pinterest LinkedIn Tumblr

ಮಂಗಳೂರು/ ಮೂಡುಬಿದಿರೆ, ಫೆಬ್ರವರಿ 09 : ತುಳುನಾಡಿನ ಸಮಸ್ತ ಬಿಲ್ಲವರು ಮಾತ್ರವಲ್ಲದೆ ವಿವಿಧ ಜಾತಿ ಮತಗಳ ಜನರು ಆರಾಧಿಸಿಕೊಂಡು ಬಂದಿರುವ ಕೋಟಿ ಚೆನ್ನಯ ಎಂಬ ವೀರ ಪುಣ್ಯಪುರುಷರ ಹಾಗು ಬಿಲ್ಲವ ಮುಖಂಡ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ವಿರುದ್ಧ ಮೂಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ ಎಫ್ಐಆರ್ ದಾಖಲಿಸಲಾಗಿದೆ.

ಜಗದೀಶ್ ಅಧಿಕಾರಿ ವಿರುದ್ಧ ಐಪಿಸಿ 295(ಎ) ಮತ್ತು 505 ರ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.

ಕೋಟಿ ಚೆನ್ನಯ, ಬಿಲ್ಲವ ಸಮುದಾಯ ಮತ್ತು ಬಿಲ್ಲವ ನಾಯಕ ಜನಾರ್ದನ ಪೂಜಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಅಧಿಕಾರಿ ವಿರುದ್ಧ ಬಿಲ್ಲವ ಸಮುದಾಯ ತಿರುಗಿಬಿದ್ದಿತ್ತು. ಜಗದೀಶ್ ಹೇಳಿಕೆ ವಿರುದ್ಧ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು.

ಬಿಲ್ಲವ ಸಮುದಾಯದ ಯುವಕರನ್ನು ಚುನಾವಣೆ ಬಂದಾಗ ತಮಗಿಷ್ಟ ಬಂದಂತೆ ತಮ್ಮ ಲಾಭಕ್ಕೋಸ್ಕರ ಬಳಸಿಕೊಂಡು ಬಳಿಕ ಅಧಿಕಾರದ ವಿಷಯ ಬಂದಾಗ ದೂರ ತಳ್ಳುವ ಬಿಜೆಪಿ ಮುಖಂಡರು ಬಿಲ್ಲವ ಸಮುದಾಯ ಮತ್ತು ಆರಾಧ್ಯ ಶಕ್ತಿಗಳ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ಆರೋಪಿಸಲಾಗಿತ್ತು.

ಈ ಎಲ್ಲಾ ಬೆಳವಣಿಗೆ ನಡುವೆ ಮಾಜಿ ಕಾರ್ಪೋರೇಟರ್ ಮತ್ತು ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಅವರು ಜಗದೀಶ್ ಅಧಿಕಾರಿ ಅವರ ಮುಖಕ್ಕೆ ಮಸಿ ಬಳಿದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡುವುದಾಗಿ ಫೇಸ್ ಬುಕ್ ಮೂಲಕ ಘೋಷಣೆ ಮಾಡಿದ್ದರು.

ಅವಹೇಳನಕಾರಿ ಮಾತುಗಳನ್ನಾಡಿರುವ ಜಗದೀಶ್ ಅಧಿಕಾರಿ ಅವರ ಮುಖಕ್ಕೆ ಯಾರು ಮಸಿ ಬಳಿಯುತಾರೆ ಅವರಿಗೆ ಒಂದು ಲಕ್ಷ ರೂ. ಗಳನ್ನು ನೀಡುವುದಾಗಿ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.

ಮೂರು ದಿನದ ಒಳಗಾಗಿ ಜಗದೀಶ್ ಅಧಿಕಾರಿ ಅವರು ನಮ್ಮ ಗರಡಿಗೆ ಆಗಮಿಸಿ ಕ್ಷಮೆ ಕೇಳಬೇಕು, ಮೂರು ದಿನಗಳ ಒಳಗೆ ಕ್ಷಮೆ ಕೇಳದಿದ್ದರೆ ಬಿಲ್ಲವ ಸಮುದಾಯದ ಯಾರಾದರೂ ಪ್ರಥಮವಾಗಿ ಅವರ ಮುಖಕ್ಕೆ ಮಸಿ ಬಳಿದರೆ ಅವರಿಗೆನಾನು ಒಂದು ಲಕ್ಷ ರೂ. ನಗದು ಬಹುಮಾನ ನೀಡುತ್ತೇನೆ” ಎಂದು ಹೇಳಿರುವ ವಿಡಿಯೋವನ್ನು ಅವರು ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ನಡುವೆ ಮೂಡುಬಿದಿರೆಯ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ರಾಜು ಪಿಕೆ ಮತ್ತು ಇತರ ಬಿಲ್ಲವ ಮುಖಂಡರು ಫೆಬ್ರವರಿ 5 ಶುಕ್ರವಾರ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಗದೀಶ್ ಅಧಿಕಾರಿ ವಿರುದ್ಧ ಜಾಮೀನು ರಹಿತ ಎಫ್ ಐ ಆರ್ ದಾಖಲಾಗಿದೆ.

Comments are closed.