ಕರ್ನಾಟಕ

ಶೃಂಗೇರಿ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಸಿದ್ದರಾಮಪ್ಪ ಅಮಾನತು

Pinterest LinkedIn Tumblr

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಗೋಚುವಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖಾಧಿಕಾರಿಯಾಗಿದ್ದ ಇನ್ಸ್‌ಪೆಕ್ಟರ್ ಸಿದ್ದರಾಮಪ್ಪ ಅವರನ್ನು ಅಮಾನತುಗೊಳಲಾಗಿದೆ.

ಪ್ರಕರಣದ ತನಿಖೆ ಸಂದರ್ಭ ವಿಳಂಬ ಮಾಡಿದ್ದು ಮಾತ್ರವಲ್ಲದೆ ದೂರು ದಾಖಲಿಸುವಲ್ಲಿ ಮಾಡಿದ ಕರ್ತವ್ಯ ಲೋಪ ಆರೋಪದಡಿಯಲ್ಲಿ ಶುಕ್ರವಾರ ಪಶ್ಚಿಮ ವಲಯದ ಐಜಿಪಿ ದೇವ್ ಜ್ಯೋತಿ ರೇ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಪ್ರಕರಣ ನಡೆದಿರುವುದು ಗಮನಕ್ಕೆ ಬಂದರೂ ಕೂಡ ಎರಡು ದಿನಗಳ ಕಾಲ ತಡವಾಗಿ ದೂರನ್ನು ದಾಖಲಿಸಿಕೊಂಡಿರುವುದು ಹಾಗೂ ಈ ವಿಷಯವನ್ನು ಶೃಂಗೇರಿಯ ಶಿಶು ಅಭಿವೃದ್ಧಿ ಇಲಾಖಾಧಿಕಾರಿಗಳ ಗಮನಕ್ಕೆ ತಾರದೇ ನಿರ್ಲಕ್ಷ್ಯ ಮಾಡಿರುವ ಆರೋಪದಡಿಯಲ್ಲಿ ತನಿಖಾಧಿಕಾರಿ ಸಿದ್ದರಾಮಪ್ಪ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಪ್ರಕರಣ ಸಂಬಂಧ ಶೃಂಗೇರಿ ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಣ ಅವರು ತನಿಖಾಧಿಕಾರಿ ಸಿದ್ದರಾಮಪ್ಪ ವಿರುದ್ಧ ಗುರುವಾರ ಐಜಿಪಿ ಸೇರಿದಂತೆ ಸಂಬಂಧಿಸಿ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಸಿದ್ದರಾಮಪ್ಪ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಬಾಲಕಿ ಅತ್ಯಾಚಾರ ಪ್ರಕರಣದ ತನಿಖೆಯನ್ನು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೃತಿ ಅವರ ನೇತೃತ್ವದಲ್ಲಿ ನಡೆಸುವಂತೆ ಐಜಿಪಿ ಸೂಚಿಸಿದ್ದಾರೆನ್ನಲಾಗಿದೆ.

Comments are closed.