ಕರಾವಳಿ

ಕರ್ಕಶ ಸೈಲನ್ಸರ್ ಕಿತ್ತು ರೋಡ್ ರೋಲರ್ ಹತ್ತಿಸಿ ಖಡಕ್ ಎಚ್ಚರಿಕೆ ಕೊಟ್ಟ ಉಡುಪಿ ಪೊಲೀಸರು (Video)

Pinterest LinkedIn Tumblr

ಉಡುಪಿ: ಕರ್ಕಶ ಶಬ್ದ ಮಾಡುವ ಸೈಲನ್ಸರ್ ಹೊಂದಿರುವ ಬೈಕ್ ವಶಕ್ಕೆ ಪಡೆದ ಉಡುಪಿ ಪೊಲೀಸರು ಸೈಲನ್ಸರ್ ಮೇಲೆ ರೋಲರ್ ಹತ್ತಿಸಿ ನಾಶಗೊಳಿಸಿದ್ದಾರೆ. ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಣಿಪಾಲ ಪೊಲೀಸರು ಶಬ್ದ ಮಾಲಿನ್ಯ ಮಾಡುವ 51 ಸೈಲನ್ಸರ್ ಗಳನ್ನು ವಶಪಡಿಸಿಕೊಂಡಿದ್ದು ಅದರ ಮೇಲೆ ರೋಡ್ ರೋಲರ್ ಹತ್ತಿಸಿ ಸೈಲನ್ಸರ್ ನಿರುಪಯುಕ್ತಗೊಳಿಸಿದರು. ಮಾತ್ರವಲ್ಲದೆ ವಾಹನ ಸವಾರರಿಂದ ದಂಡ ವಸೂಲು ಮಾಡಿ ಖಡಕ್ ಎಚ್ಚರಿಕೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ್, ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ., ಎಸ್ಸೈಗಳಾದ ರಾಜಶೇಖರ ವಂದಲಿ, ಸುಧಾಕರ ತೋನ್ಸೆ, ಪ್ರೊಬೆಶನರಿ ಎಸ್ಸೈಗಳಾದ ನಿರಂಜನ್ ಗೌಡ, ದೇವರಾಜ ಬಿರಾದಾರ, ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು. 50 ದ್ವಿಚಕ್ರ ವಾಹನದ ಸವಾರರು ಹಾಗೂ ಒಬ್ಬ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ 51 ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರಿಂದ ಒಟ್ಟು 25,500ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.

ಆಸ್ಪತ್ರೆ, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ಪ್ರಮುಖ ಕೇಂದ್ರವಾದ ಮಣಿಪಾಲದಲ್ಲಿ ದ್ವಿಚಕ್ರ ವಾಹನಗಳಲ್ಲಿನ ಕಂಪೆನಿ ಪಿಟ್ಟೆಡ್ ಸೈಲನ್ಸರ್ ತೆಗೆದು ಅದಕ್ಕೆ ಕರ್ಕಶ ಶಬ್ದ ಮಾಡುವ ಸೈಲನ್ಸರ್ ಆಲ್ಟ್ರೇಶನ್ ಮಾಡಿದ್ದು ಇದು ನಾಗರಿಕರಲ್ಲಿ ಕಿರಿಕಿರಿ ಉಂಟುಮಾಡಿತ್ತು. ಎದೆ ಝಲ್ ಎನಿಸುವಷ್ಟರ ಮಟ್ಟಿಗೆ ಕೆಲವು‌ ಸೈಲನ್ಸರ್ ಶಬ್ದ ಮಾಡುತ್ತದೆ. ಪೊಲೀಸರ ಈ ಕಾರ್ಯಕ್ಕೆ ಉತ್ತಮ ಪ್ರಶಂಸೆ ದೊರಕಿದ್ದು ಇಂತಹ ಕಾರ್ಯಾಚರಣೆ ನಿರಂತರವಾಗಿ ನಡೆಯಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಕುಂದಾಪುರದಲ್ಲಿ ಅಂದಿನ ನಗರ ಠಾಣೆ ಪಿಎಸ್ಐ ಹರೀಶ್ ನಾಯ್ಕ್ ದ್ವಿಚಕ್ರ ವಾಹನ ಸವಾರರಿಂದಲೇ ಸೈಲನ್ಸರ್ ಪೈಪ್ ತೆಗೆಸಿ ದಂಡ ಹಾಕುವ ಮೂಲಕ ನಗರದಲ್ಲಿ ಇಂತಹ ಸೈಲನ್ಸರ್ ಬಳಕೆಗೆ ಒಂದಷ್ಟು ಕಡಿವಾಣ ಬಿದ್ದಿತ್ತು.

(ವರದಿ- ಯೋಗೀಶ್ ಕುಂಭಾಸಿ)

 

Comments are closed.