ಕರಾವಳಿ

ರಾಜ್ಯದ ಪ್ರತಿ ಮನೆ ಮನೆಗು ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು : ಸಚಿವ ಕೆ.ಎಸ್. ಈಶ್ವರಪ್ಪ

Pinterest LinkedIn Tumblr

ಮಂಗಳೂರು / ಬಂಟ್ವಾಳ, ಫೆಬ್ರವರಿ.01: ದೇಶದಲ್ಲಿನ ಪ್ರತಿಯೊಬ್ಬ ನಾಗರಿಕರಿಗು ಶುದ್ಧ ಕುಡಿಯುವ ನೀರು ತುಂಬಾ ಅವಶ್ಯಕವಾಗಿದು ‌ ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಯಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಸ್ಪರ್ಶ ಸಭಾಂಗಣದಲ್ಲಿ ಬಂಟ್ವಾಳ ತಾಲೂಕಿನ ನರಿಕೊಂಬು ಮತ್ತು ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದೂ, ಈ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಂತೆ ಬಹು ಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯಡಿ 62 ಕೋಟಿ ರೂ. ಅನುದಾನದಲ್ಲಿ ಬಂಟ್ವಾಳ ತಾಲೂಕಿನ ನರಿಕೊಂಬು ಮತ್ತು ಸರಪಾಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ ಎಂದರು.

ನೀರಿನ ಮೂಲಗಳಾದ ಕೆರೆ, ನದಿ, ಅಣೆಕಟ್ಟುಗಳಿಂದ ನೀರನ್ನು ಸಂಗ್ರಹಿಸಿ ರಾಜ್ಯದ ಪ್ರತಿ ಮನೆ ಮನೆಗೂ ನೀರಿನ ತಲುಪುವಂತಾಗಬೇಕು ಹಾಗೂ ದಿನದ 24 ಗಂಟೆಗಳ ಕಾಲವೂ ಶುದ್ಧ ಕುಡಿಯುವ ನೀರು ಪೂರೈಕೆ ಆಗಬೇಕು ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು ತಮ್ಮ ಜಿಲ್ಲೆಯಲ್ಲಿ ಯಾವ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇವೆ ಎಂದು ಗುರುತಿಸಿ ಅದನ್ನು ಸರಿಪಡಿಸಲು ಕಾರ್ಯವನ್ನು ಮಾಡಬೇಕು ಎಂದರು.

ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಭಾರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಯೋಜನೆಯು ಬಹಳ ವೇಗವಾಗಿ, ಸಮರ್ಪಕವಾಗಿ ಹಾಗೂ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣವಾಗಿರುವುದು ಬಹಳ ಸಂತೋಷಕರ ಸಂಗತಿ ಎಂದರು.

ರಾಜ್ಯದ ಕಡು ಬಡವರಿಗೂ ಕೂಡ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು ಹಾಗೂ ಈ ಯೋಜನೆಯಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಬೇಕು ಎಂದರು. ರಾಜಕೀಯ ವ್ಯಕ್ತಿಗಳು ಪ್ರಜಾಪ್ರಭುತ್ವದ ನಿಯಮದಂತೆ ನಡೆದುಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಮಾಡಿಕೊಡಬೇಕು ಹಾಗೂ ಬಂಟ್ವಾಳ ತಾಲೂಕಿನಲ್ಲಿ ಇನ್ನಿತರ ಅಭಿವೃದ್ಧಿ ಕಾರ್ಯಗಳು ನೆರವೇರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಂದ್ರ ನಾಯಕ್ ಮಾತನಾಡಿ, ಬಂಟ್ವಾಳ ತಾಲೂಕು ನರಿಕೊಂಬು ಮತ್ತು ಇತರೆ 38 ಜನ ವಸತಿ ಪ್ರದೇಶಗಳಿಗೆ ಹಾಗೂ ಸರಪಾಡಿ ಮತ್ತು ಇತರೆ 95
ಜನ ವಸತಿ ಪ್ರದೇಶಗಳಿಗೆ 22.55 ಕೋಟಿ ಮತ್ತು 38.70 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿ ಪೂರ್ಣಗೊಂಡಿದೆ ಎಂದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರವು ಒಟ್ಟು 39 ಗ್ರಾಮ ಪಂಚಾಯತಿಗಳನ್ನು ಹೊಂದಿದ್ದು, ಈ ಯೋಜನೆಗಳು 30 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುತ್ತದೆ. ಇನ್ನುಳಿದ ವೀರಕಂಬ, ಬೋಳಂತೂರು, ಸಜೀಪ ಮುನ್ನೂರು, ಸಜೀಪ ಮೂಡ ಮತ್ತು ಮಂಚಿ ಗ್ರಾಮ ಪಂಚಾಯತಿಗಳ ಒಟ್ಟು 49 ಜನ ವಸತಿ ಪ್ರದೇಶಗಳಿಗೆ ಹಾಗೂ ಉಳ್ಳಾಲ ನಗರ ಸಭೆ, ಕೋಟೆಕಾರು ಪಟ್ಟಣ ಪಂಚಾಯತಿಗಳಿಗೆ ನೇತ್ರಾವತಿ ನದಿಯಿಂದ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಕೇಂದ್ರ ಜಲ ಜೀವನ ಮಿಷನ್ ಯೋಜನೆಯಡಿ 2024 ರ ಒಳಗೆ ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಿಗೆ ನಳಗಳ ಮೂಲಕ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಯೋಜನೆಗೆ ಸಂಬಂದಿಸಿದಂತೆ, ಬಂಟ್ವಾಳ ವಿಧಾನ ಸಭಾಸಭಾ ಕ್ಷೇತ್ರದ 30 ಗ್ರಾಮ ಪಂಚಾಯತಿಗಳ 46 ಗ್ರಾಮಗಳಿಗೆ ಅಂದಾಜು 33.72 ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು, ಈ ಯೋಜನೆ ಅನುಷ್ಟಾನಗೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವಮಣಿ. ಆರ್, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯದ ಕಾರ್ಯನಿರ್ವಾಹಕ ಅಭಿಯಂತರರಾದ ನರೇಂದ್ರ ಬಾಬು, ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ, ಮಂಜುಳಾ, ಕಮಲಾಕ್ಷೀ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

 

Comments are closed.