ಬೆಂಗಳೂರು: ಕಳೆದ ಕೆಲ ಸಮಯಗಳಿಂದ ಖಿನ್ನತೆಗೊಳಗಾಗಿದ್ದ ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಅವರು ಮಾಗಡಿ ರಸ್ತೆಯ ವೃದ್ಧಾಶ್ರಮವೊಂದರಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ.
ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿರುವ ವೃದ್ಧಾಶ್ರಮದಲ್ಲಿ ನಟಿ ಜಯಶ್ರೀ ರಾಮಯ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ಸಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ರಾಮಯ್ಯ, ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಾವಿನ ಕುರಿತು ಮಾತನಾಡಿದ್ದರು. ಕಳೆದ ಕೆಲ ಸಮಯಗಳ ಹಿಂದೆ ಆಸ್ಪತ್ರೆಯಿಂದಲೇ ಫೇಸ್ ಬುಕ್ ಲೈವ್ ವಿಡಿಯೋ ಮಾಡಿದ್ದ ಅವರು, ನಾನು ಹಣ ಅಥವಾ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿಲ್ಲ. 5 ವರ್ಷ ವಯಸ್ಸಿನಲ್ಲಿಯೇ ನನ್ನ ಮೇಲೆ ದೌರ್ಜನ್ಯ ನಡೆದಿತ್ತು. 7 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಬದುಕು ಸಾಕಾಗಿದ್ದು ನನಗೆ ದಯಾಮರಣ ಕೊಡಿಸಿ ಎಂದು ನೋವು ತೋಡಿಕೊಂಡಿದ್ದರು.
ಆ ನಂತರ ನಟ ಸುದೀಪ್ ಅವರು ಜಯಶ್ರೀಗೆ ಧೈರ್ಯ ತುಂಬಿದ್ದರು. ನಂತರ ಸಮಾಧಾನಗೊಂಡಿದ್ದ ಜಯಶ್ರೀ ತಾನು ಆತ್ಮಹತ್ಯೆ ನಿರ್ಧಾರದಿಂದ ಹೊರಬಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಆದರೆ ವೃದ್ದಾಶ್ರಮವೊಂದರಲ್ಲಿ ಜಯಶ್ರೀ ರಾಮಯ್ಯ ನೇಣಿಗೆ ಶರಣಾಗಿದ್ದಾರೆ.
ಕನ್ನಡ ಗೊತ್ತಿಲ್ಲ, ಉಪ್ಪು ಹುಳಿ ಖಾರ ಚಿತ್ರದಲ್ಲಿ ನಟಿಸಿದ್ದ ಜಯಶ್ರೀ ಬಿಗ್ ಬಾಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸುವ ಮೂಲಕ ಮನೆಮಾತಾಗಿದ್ದರು.