ಕರಾವಳಿ

ನಗರದ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ರ್‍ಯಾಗಿಂಗ್ : ಒಂಬತ್ತು ವಿದ್ಯಾರ್ಥಿಗಳು ಅಂದರ್

Pinterest LinkedIn Tumblr

ಮಂಗಳೂರು,ಜನವರಿ.22 : ನಗರದ ಹೊರವಲಯದ ಖಾಸಗಿ ಕಾಲೇಜೊಂದರ ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಒಂಬತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ನಗರದ ಹೊರವಲಯದ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮೊದಲ ವರ್ಷ ಬಿ-ಬಿಫಾರ್ಮಾ ಕಲಿಯುತ್ತಿದ್ದ ವಿದ್ಯಾರ್ಥಿಗೆ ರ್‍ಯಾಗಿಂಗ್ ನಡೆಸಿದ್ದು, ಕಿರಿಯ ವಿದ್ಯಾರ್ಥಿ ತಾಯಿಗೆ ವಿಷಯ ತಿಳಿಸಿದ್ದು, ಅದೇ ದಿನ ಮನೆಗೆ ಕರೆದೊಯ್ದಿದ್ದರು.

ಆ ಬಳಿಕ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾಲೇಜಿಗೆ ಪಾವತಿಸಿದ 1.63 ಲಕ್ಷ ರೂ. ಹಾಗೂ ದಾಖಲೆ ಪತ್ರಗಳನ್ನು ಹಿಂತಿರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ವಿವರ:

ಶ್ರೀನಿವಾಸ್ ಕಾಲೇಜಿನ ಕಲಿಯುತ್ತಿದ್ದ ಕಾಸರಗೋಡು ಮೂಲದ ಪ್ರಥಮ ವರ್ಷದ ಬಿ ಫಾರ್ಮಾ ವಿದ್ಯಾರ್ಥಿ ಗುರುವಾರ ಮಧ್ಯಾಹ್ನ ಕಾಲೇಜು ಮುಗಿಸಿ ಹಾಸ್ಟೆಲ್ ಕಡೆಗೆ ಬರುತ್ತಿದ್ದಾಗ ಹಿರಿಯ ವಿದ್ಯಾರ್ಥಿಗಳು ಅಡ್ಡಗಟ್ಟಿ ತಲೆ ಕೂದಲು ಹಾಗೂ ಮೀಸೆ ತೆಗೆದು ಬರಬೇಕೆಂದು ಜೋರು ಮಾಡಿದ್ದರು. ಓರ್ವ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದ. ಕೆಲವು ದಿನಗಳ ಬಳಿಕ ತಲೆಕೂದಲು ಹಾಗೂ ಮೀಸೆ ತೆಗೆಯದಿದ್ದರೆ ನಾವೇ ಕತ್ತರಿಸುತ್ತೇವೆ ಎಂದು ಬೆದರಿಕೆಯೊಡ್ಡಿ ಮತ್ತೆ ಹಲ್ಲೆ ನಡೆಸಿದ್ದರು.

ಇದರಿಂದ ಬೆಸತ್ತ ವಿದ್ಯಾರ್ಥಿ ಮರಳಿ ತನ್ನ ಊರಿಗೆ ಹೋಗಿದ್ದು ಮತ್ತೆ ಕಾಲೇಜಿಗೆ ಹೋಗುವುದಕ್ಕೆ ಹಿಂಜರಿದಿದ್ದ, ಬಳಿಕ ವಿದ್ಯಾರ್ಥಿಯ ಪೋಷಕರಿಗೆ ಅನುಮಾನ ಬಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆಯ ವೇಳೆ ಕಾಲೇಜಿನಲ್ಲಿ ರ‍್ಯಾಗಿಂಗ್ ವಿಷಯ ಬೆಳಕಿಗೆ ಬಂದಿದ್ದು, ಇದರಲ್ಲಿ ಒಂಬತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತರನ್ನು ಜಿಷ್ಣು(20), ಶ್ರೀಕಾಂತ್ ಪಿ.ವಿ(20), ಅಶ್ವಂತ್ (20), ಸಾಯಂತ್ (22), ಅಭಿರತ್ ರಾಜೀವ್(21), ರಾಹುಲ್ ಪಿ (21), ಜಿಷ್ಣು (20), ಮುಖ್ತರ್ ಅಲಿ (19) ಮತ್ತು ಮೊಹಮ್ಮದ್ ರಜೀಮ್ ಕೆ (20) ಎಂದು ಹೆಸರಿಸಲಾಗಿದೆ.

ರ‍್ಯಾಗಿಂಗ್‌ನಿಂದಾಗಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ನೋಡಿದ್ದೇವೆ. ಈ ಸಮಸ್ಯೆಯನ್ನು ನೋಡಿಕೊಳ್ಳುವುದು ಕಾಲೇಜು ಆಡಳಿತದ ಜವಾಬ್ದಾರಿಯಾಗಿದೆ. ಯಾವುದೇ ಕಾಲೇಜಿನಲ್ಲಿ ರ‍್ಯಾಗಿಂಗ್ ನಡೆಯಬಾರದು. ಇಂತಹ ಘಟನೆಗಳು ನಡೆದರೆ ಪುರ್ಣಜವಾಬ್ದಾರಿಗಳನ್ನು ಕಾಲೇಜು ನೋಡಿಕೊಳ್ಳಬೇಕು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

Comments are closed.