ಕರಾವಳಿ

ಉಳ್ಳಾಲ: ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಗು ರಾಜಕಾರಣಿಗಳ ವಿರುದ್ಧ ಅವಹೇಳನಕಾರಿ ಬರಹ ಪತ್ತೆ

Pinterest LinkedIn Tumblr

ಮಂಗಳೂರು, ಜನವರಿ,20: ಉಳ್ಳಾಲ: ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಕಾಂಡೋಮ್ ಮತ್ತು ನಿಂದನಾರ್ಹ ಬರಹಗಳುಳ್ಳ ಭಿತ್ತಿಪತ್ರವನ್ನು ಹಾಕಿ ವಿಕೃತಿ ಮೆರೆದ ಘಟನೆ ಉಳ್ಳಾಲ ನಡೆದಿದೆ.

ಉಳ್ಳಾಲ ಪ್ಯಾರೀಸ್ ಜಂಕ್ಷನ್ ಬಳಿ ಕೇಂದ್ರ ಬಸ್ ನಿಲ್ದಾಣ ಸಮೀಪದ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಮುಖ್ಯಮಂತ್ರಿ ಸಹಿತ ಬಿಜೆಪಿ ನಾಯಕರ ಭಾವಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನಕಾರಿ ಬರಹಗಳಿದ್ದ ಭಿತ್ತಿಪತ್ರಗಳನ್ನು ಹಾಕಿ ವಿಕೃತಿ ಮೆರೆದಿರುವುದು ಕಂಡುಬಂದಿದೆ.

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಇನ್ನಿತರ ಬಿಜೆಪಿ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನಕಾರಿ ಬರಹಗಳನ್ನು ಬರೆಯಲಾಗಿದೆ. ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಭಾವಚಿತ್ರಕ್ಕೆ ಶಿಲುಬೆಯಾಕೃತಿ ಚಿತ್ರ ಬಿಡಿಸಿ ಕಾಣಿಕೆ ಹುಂಡಿಯೊಳಗೆ ಹಾಕಲಾಗಿದೆ. ಅಲ್ಲದೆ ಕಾಂಡಮ್ ಗಳು ಕೂಡಾ ಕಂಡುಬಂದಿದೆ.

ಉಳ್ಳಾಲದ ಕೊರಗಜ್ಜ ಸೇವಾ ಸಮಿತಿಯವರು ಪ್ರತಿ ತಿಂಗಳ ಸಂಕ್ರಾಂತಿಯಂದು ಕಾಣಿಕೆ ಡಬ್ಬಿಯ ಹಣ ತೆಗೆಯುವ ವಾಡಿಕೆ ಹೊಂದಿದ್ದು, ಈ ಬಾರಿ ಸ್ವಲ್ಪ ತಡವಾಗಿ ಅಂದರೆ ಮಂಗಳವಾರ ಸಂಜೆ ಕಾಣಿಕೆ ಡಬ್ಬಿ ತೆರೆದಿದ್ದು, ಡಬ್ಬಿಯ ಒಳಗೆ ಕಾಂಡೋಮ್‌ಗಳು ಹಾಗೂ ಪ್ರಚೋದನಕಾರಿ ಬರಹಗಳು ಇದ್ದಂತಹ ಪ್ಲೆಕ್ಸ್‌ ಒಂದು ಕಂಡು ಬಂದಿದೆ.

ಬೆಂಗಳೂರಿನ ಕೆ.ಆರ್.ಐ.ಡಿ.ಎಲ್. ನಿಗಮ ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ಶುಭಕೋರಿದ ಬ್ಯಾನರ್ ಕಾಣಿಕೆ ಡಬ್ಬಿಯಲ್ಲಿ ಕಂಡುಬಂದಿದ್ದು, ಅದರಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಕಟೀಲು ಸೇರಿದಂತೆ ಅನೇಕ ಬಿಜೆಪಿ ನಾಯಕರ ಭಾವ ಚಿತ್ರಗಳನ್ನು ಗೀಚಿ ಕುರೂಪಗೊಳಿಸಲಾಗಿದೆ. ಬಿ.ಎಸ್.ವೈ ಮತ್ತು ಅವರ ಪುತ್ರ ವಿಜಯೇಂದ್ರ ಫೋಟೊದ ಕತ್ತಲ್ಲಿ ಶಿಲುಬೆಯ ಹಾರದ ಚಿತ್ರ ಬಿಡಿಸಿರುವುದು ಪತ್ತೆಯಾಗಿದೆ.

”ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು, ದೇವ ಲೋಕದಿಂದ ಹೊರ ಹಾಕಲ್ಪಟ್ಟ ದ್ರೋಹಿ ದೂತರುಗಳು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂಲೋಕದ ಜನರನ್ನು ಭ್ರಷ್ಟರನ್ನಾಗಿಸಿ, ನಕಲಿ ದೇವರಾಗಿ ಅನಾದಿಕಾಲದಿಂದ ಮೆರೆಯಲ್ಪಡುತ್ತಿದೆ. ಎಚ್ಚರ, ರಕ್ಷ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ ಬಾಚಿ ತಿಂದು ತೇಗುವ ಈ ಅಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕಾಗಿದೆ. ಜನರು ಸಿದ್ದರಾಗಬೇಕು” ಎಂದು ಫ್ಲೆಕ್ಸ್‌ನಲ್ಲಿ ಬರೆಯಲಾಗಿದೆ.

ಈ ಬಗ್ಗೆ ಕೊರಗಜ್ಜ ಸೇವಾ ಸಮಿತಿಯವರು ಹಾಗೂ ಅರ್ಚಕ ಸುನೀಲ್ ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Comments are closed.