ಕರಾವಳಿ

ಮದುವೆ ದಿಬ್ಬಣದ ಬಸ್ ಪಲ್ಟಿಯಾಗಿ ಐವರು ಸಾವನ್ನಪ್ಪಿರುವ ಘಟನೆ ಬಗ್ಗೆ ಸಚಿವ ಪೂಜಾರಿ ತೀವ್ರ ಸಂತಪ

Pinterest LinkedIn Tumblr

ಮಂಗಳೂರು : ಮದುವೆ ದಿಬ್ಬಣದ ಖಾಸಗಿ ಬಸ್ ಕೇರಳದ ಪಾಣತ್ತೂರು ಬಳಿ ಪಲ್ಟಿಯಾಗಿ ಕರ್ನಾಟಕದ ಐವರು ಸಾವನ್ನಪ್ಪಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತೀವ್ರ ಸಂತಪ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ತಿಳಿಸಿದ್ದಾರೆ.

ದಕ್ಷಿಣಕನ್ನಡದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ರಾಜಪುರಂ ಬಳಿ ಕೊಡಗಿನಿಂದ ಮದುವೆ ಸಮಾರಂಭಕ್ಕೆ ಹೊರಟಿದ್ದ ಬಸ್ ಆಕಸ್ಮಿಕ ಅಪಘಾತವಾಗಿ ಪಲ್ಟಿ ಹೊಡೆದು ಮನೆ ಮೇಲೆ ಬಿದ್ದಿದೆ.

ಘಟನೆಯಲ್ಲಿಒಂದು ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದು ಹಾಗೂ ಮೂವತ್ತಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಐವರು ಕರ್ನಾಟಕದ ಸ್ಥಳೀಯರು ಸಾವನ್ನಪ್ಪಿದ್ದಾರೆ ಎಂದು ಸಚಿವರು ನೋವು ತೋಡಿಕೊಂಡಿದ್ದಾರೆ.

ಅಪಘಾತದಲ್ಲಿ ಗಾಯಗೂಂಡವರಿಗೆ ಅಗತ್ಯವಿರುವ ನೆರವು, ವೈದ್ಯಕೀಯ ಚಿಕಿತ್ಸೆ ಹಾಗೂ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿ, ವೈದ್ಯಾಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

ಘಟನೆ ವಿವರ:

ಪುತ್ತೂರಿನಿಂದ ಸುಳ್ಯ ಆಲೆಟ್ಟಿ ಮೂಲಕ ಪಾಣತ್ತೂರು ಕಡೆಗೆ ಹೋಗುತ್ತಿದ್ದಂತ ಮದುವೆ ದಿಬ್ಬಣದ ಬಸ್ಸೊಂದು, ಕೇರಳದ ಪಾನತ್ತೂರು ಬಳಿ ಪಲ್ಟಿಯಾಗಿದೆ. ಕರ್ನಾಟಕ -ಕೇರಳ ಗಡಿಭಾಗದ ಕಲ್ಲಪಳ್ಳಿ ಬಳಿ ಭಾನುವಾರ ಈ ಅವಘಡ ಸಂಭವಿಸಿದೆ.

ಕೊಡಗಿನ ಕರಿಕೆಯಲ್ಲಿ ಇದ್ದಂತ ಮದುವೆ ಕಾರ್ಯಕ್ರಮಕ್ಕೆ ಕಲ್ಲಪ್ಪಳ್ಳಿ ಪಾನತ್ತೂರು ಮೂಲಕ ಈ ಬಸ್ ತೆರಳುತ್ತಿತ್ತು. ಈ ವೇಳೆ ಬಸ್ ಕೇರಳದ ಪಾನತ್ತೂರು ಬಳಿಯ ಗಡಿಗುಡ್ಡೆ ಪೆರಿಯಾರಂ ಎಂಬಲ್ಲಿ ಮನೆಯೊಂದರ ಮೇಲೆ ಪಲ್ಟಿಯಾಗಿ ಬಿದ್ದದ್ದರಿಂದ ಒಂದು ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದು, ಇದರಲ್ಲಿ ಕರ್ನಾಟಕದ ಐವರು ಸೇರಿದ್ದಾರೆ.

ಮೃತರನ್ನು ರಾಜೇಶ್, ರವಿಚಂದ್ರ, ಆದರ್ಶ್, ಶ್ರೇಯಸ್, ಸುಮತಿ, ಶಶಿ ಮತ್ತು ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಮಕ್ಕಳು.

ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಚನಿಲ ಕೊಗ್ಗು ನಾಯ್ಕ‌ ಅವರ ಪುತ್ರಿಯ‌ ಮದುವೆ ಪಾಣತ್ತೂರು ಬಳಿಯ ಕೊಡಗು ಜಿಲ್ಲಾ ವ್ಯಾಪ್ತಿಯ ಕರಿಕೆ ‌ ಎಂಬಲ್ಲಿ ವರನ ಮನೆಯಲ್ಲಿ ನಿಗದಿಯಾಗಿತ್ತು.

ಈ ಕಾರ್ಯಕ್ರಮಕ್ಕೆ ವಧುವಿನ ಊರಾದ ಈಶ್ವರ ಮಂಗಲದಿಂದ ದಿಬ್ಬಣ ಹೋಗುತ್ತಿತ್ತು. ವಧು ಮತ್ತು ಇತರರು ಟಿಟಿ ವಾಹನದಲ್ಲಿ ಹೋಗುತ್ತಿದ್ದರು. ಹಿಂದಿನಿಂದ ಖಾಸಗಿ ಬಸ್ ನಲ್ಲಿ 60 ಕ್ಕೂ ಹೆಚ್ಚು ಮಂದಿ ಹೋಗುತ್ತಿದ್ದರು.

ಮಾರ್ಗ ಮಧ್ಯೆ ಅಂದ್ರೆ ಕೇರಳದ ಕಾಸರಗೋಡು ಜಿಲ್ಲೆಯ ಕಲ್ಲಪಳ್ಳಿ ಬಳಿಯ ಪೆರಿಯಾರಂ ಘಾಟ್ ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮನೆ ಮೇಲೆ ಉರುಳಿದೆ. .ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿದೆ. 35 ಮಂದಿಯನ್ನು ಕಾಞಂಗಾಡ್ ಆಸ್ಪತ್ರೆಗೆ, 11 ಮಂದಿಯನ್ನು ಮಂಗಳೂರು ಆಸ್ಪತ್ರೆಗೂ ದಾಖಲಿಸಲಾಗಿದ್ದು, ಈ ಪೈಕಿ ಹತ್ತಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿತ್ತು.

Comments are closed.