ಕುಂದಾಪುರ: ಸಂವಿಧಾನ ಹಾಗೂ ಸರಕಾರಕ್ಕಿಂತ ಯಾರೂ ಕೂಡ ಮೇಲಲ್ಲ. ಸಂವಿಧಾನಕ್ಕೆ ಸವಾಲೆಸೆದ ದುಷ್ಕರ್ಮಿಗಳನ್ನು ಸದೆ ಬಡಿಯಲು ಸರಕಾರ ಮುಂದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕುಂದಾಪುರದ ಮಿನಿವಿಧಾನಸೌಧದದಲ್ಲಿ ಶನಿವಾರದಂದು ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದ ಜೊತೆ ಅವರು ಮಾತನಾಡಿದರು.
ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಪೈಕಿ ಕೆಲವರನ್ನು ಬಂಧಿಸಲಾಗಿದ್ದು ಉಳಿದ ದುಷ್ಕರ್ಮಿಗಳ ಬಂಧನಕ್ಕೆ ಎಸ್ಪಿ ಮಾರ್ಗದರ್ಶನದಲ್ಲಿ ಪೊಲೀಸರ ತಂಡ ಕೆಲಸ ಮಾಡುತ್ತಿದೆ. ಈ ಘಟನೆ ಬಗ್ಗೆ ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸುವುದು, ಮಾಧಕ ದ್ರವ್ಯ ಮಾರಾಟ ಜಾಲ ಸೇರಿದಂತೆ ದೇಶ ದ್ರೋಹವೆಸಗುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ ಎಂದರು. ಇನ್ನು ಎಸ್.ಡಿ.ಪಿ.ಐ ಸಂಘಟನೆ ಕಾರ್ಯಕರ್ತರನ್ನು ಬಿಡದಿದ್ದರೆ ಎಸ್ಪಿ ಕಚೇರಿ ಮುತ್ತಿಗೆ ಹಾಕುವ ಬೆದರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾನೂನಿಗಿಂತ ಯಾರೂ ಕೂಡ ಮೇಲಲ್ಲ. ತಪ್ಪಿತಸ್ಥರ ಮೇಲಾದ ಕಾನೂನು ಕ್ರಮದ ವಿರುದ್ಧ ಬೆದರಿಕೆ ಹಾಕಿದರೆ ಅದಕ್ಕೆ ಬಗ್ಗುವುದಿಲ್ಲ. ಪೊಲೀಸ್ ಇಲಾಖೆ ಜೊತೆ ಸರಕಾರ ಸದಾ ಇದೆ. ವ್ಯವಸ್ಥೆ ವಿರುದ್ಧ ಹೋಗುವ ಇಂತಹ ಸಂಘಟನೆಯನ್ನು ಮಟ್ಟಹಾಕಲು ಕೂಡ ಗೊತ್ತಿದೆ ಎಂದರು.
ಗ್ರಾ.ಪಂ ಸದಸ್ಯರಿಗೆ ತರಬೇತಿ….
ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯರರು ಮೇಲುಗೈ ಸಾಧಿಸಿದ್ದು, ಉಡುಪಿ ಜಿಲ್ಲೆಯ 153 ಗ್ರಾ.ಪಂ ನಲ್ಲಿ 120ಕ್ಕೂ ಅಧಿಕ ಗ್ರಾ.ಪಂ ಬಿಜೆಪಿ ತೆಕ್ಕೆಗೆ ಬಂದಿದೆ. ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಆಯ್ಕೆಯಾದ ಗ್ರಾ.ಪಂ ಸದಸ್ಯರಿಗೆ ಶೀಘ್ರವೇ ತರಭೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ. ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಿಗೆ ಜನಾದೇಶ ಸಿಕ್ಕಿದೆ. ಗ್ರಾಮ ಸರ್ಕಾರವಾಗಿ ಪಂಚಾಯತ್ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಮಕರ ಜ್ಯೋತಿ ಯಾತ್ರೆ ವಿಚಾರ…
ಶಬರಿಮಲೆ ಅಯ್ಯಪ ಸ್ವಾಮಿ ಸನ್ನಿಧಿಯ ಮಕರ ಜ್ಯೋತಿಗೆ ತೆರಳುವ ರಾಜ್ಯದ ಭಕ್ತರಿಗೆ ಸಹಕಾರ ನೀಡಲು ವ್ಯವಸ್ಥೆ ಕಲ್ಪಿಸುತ್ತೇವೆ. ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ, ಕೋವಿಡ್ ನಿಯಮಾವಳಿಯಂತೆ ಭಕ್ತರಿಗೆ ಸಹಕಾರ ನೀಡಲು ಕ್ರಮಕೈಗೊಳ್ಳುತ್ತೇವೆಂದರು.
ರಾಜ್ಯದಲ್ಲಿ ಒಂದಷ್ಟು ನೌಕರರಿಗೆ ಸಂಬಳವಾಗದ ವಿಚಾರದಲ್ಲಿ ಮಾತನಾಡಿದ ಅವರು ಕೋವಿಡ್ ಹಿನ್ನೆಲೆ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಏಳು ತಿಂಗಳಿನಿಂದ ಸಾಂತ್ವಾನ ಕೇಂದ್ರದ ಸಿಬ್ಬಂದಿಗಳಿಗೆ ಸಂಬಳವಾಗದ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆಯವರ ಗಮನಕ್ಕೆ ತಂದಿರುವೆ ಎಂದರು.
ಈ ಸಂದರ್ಭ ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸದಸ್ಯ ಗಿರೀಶ್ ಜಿ.ಕೆ., ಬಿಜೆಪಿ ಮುಖಂಡರಾದ ಸುರೇಶ್ ಶೆಟ್ಟಿ ಬೀಜಾಡಿ, ಅರುಣ್ ಬಾಣಾ ಮೊದಲಾದವರಿದ್ದರು.
(ವರದಿ- ಯೋಗೀಶ್ ಕುಂಭಾಸಿ)