ಮಂಗಳೂರು/ ಉಳ್ಳಾಲ: ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕಿನಲ್ಲಿ ಬಂದ ತಂಡವೊಂದು ಹಿಂಬದಿಯಿಂದ ಢಿಕ್ಕಿ ಹೊಡೆದು ಬಳಿಕ ಇಬ್ಬರಿಗೂ ಚೂರಿ ಇರಿದು ಕೊಲೆಯತ್ನ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿಯಲ್ಲಿ ನಡೆದಿದೆ.
ಚೂರಿ ಇರಿತಕ್ಕೊಳಗಾದವರನ್ನು ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಮತ್ತು ಪಂಡಿತ್ ಹೌಸ್ ನಿವಾಸಿ ಪವನ್ (27) ಎಂದು ಗುರುತಿಸಲಾಗಿದೆ. ಚರ್ಚೊಂದರಲ್ಲಿ ಕ್ಯಾಟರಿಂಗ್ ನಲ್ಲಿ ಕೆಲಸಕ್ಕಿದ್ದಸ್ನೇಹಿತರನ್ನು ಕರೆ ತರಲು ತೆರಳುವಾಗ ಘಟನೆ ನಡೆದಿದೆ ಎನ್ನಲಾಗಿದೆ.
ಆದಿತ್ಯ ಮತ್ತು ಪವನ್ ಅವರು ಕ್ಯಾಟ್ರಿಂಗ್ ನಲ್ಲಿ ಕೆಲಸಕ್ಕಿದ್ದ ಸ್ನೇಹಿತನನ್ನು ಕರೆ ತರಲು ಕುತ್ತಾರ್ ನಿಂದ ಅಂಬ್ಲಮೊಗರು ಕಡೆ ಶುಕ್ರವಾರ ರಾತ್ರಿ ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕೃಷ್ಣಕೋಡಿ ಬಳಿ ಹಿಂಬದಿಯಿಂದ ಬಂದ ಅಪರಿಚಿತರು ಬೈಕ್ ಆದಿತ್ಯ ಮತ್ತು ಪವನ್ ಇದ್ದ ಬೈಕ್ ಗೆ ಗುದ್ದಿದೆ. ಬಳಿಕ ಅಪರಿಚಿತರು ಇಬ್ಬರಿಗೂ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.
ಗಾಯಗೊಂಡಿರುವ ಇಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.