ಕರಾವಳಿ

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಮದುವೆ ಪ್ರಸ್ತಾಪ, ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ.ವಂಚನೆ : ಆರೋಪಿ ಅಂದರ್

Pinterest LinkedIn Tumblr

ಮಂಗಳೂರು, ಡಿಸೆಂಬರ್.25: ಮ್ಯಾಟ್ರೊಮೊನಿಯಲ್‌ನಲ್ಲಿ ತಾನುಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ಎಂಬುದಾಗಿ ಬಿಂಬಿಸಿ ಯುವತಿಯರಿಗೆ ಮೋಸ ಮಾಡಿದಲ್ಲದೇ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಈ ಮೂಲಕ ಮದುವೆ ಪ್ರಸ್ತಾಪ, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕುರುಬನಹಳ್ಳಿ ನಿವಾಸಿ ಪರಮೇಶ್ವರಪ್ಪ ರಂಗಪ್ಪ (23) ಎಂದು ಹೆಸರಿಸಲಾಗಿದೆ. ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಹರ್ಷ ಎನ್ ಅವರು ಪರಮೇಶ್ವರಪ್ಪ ವಿರುದ್ಧ ಡಿಸೆಂಬರ್ 2ರಂದು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಪರಮೇಶ್ವರಪ್ಪ ತನ್ನ ನಕಲಿ ಫೇಸ್‌ಬುಕ್‌ ಖಾತೆಯಲ್ಲಿ ತಾನು ಮಂಗಳೂರಿನ ಹಿರಿಯ ಅಂಚೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಸುಳ್ಳು ಹೇಳಿಕೊಂಡಿದ್ದು ಗೋವಾ ನಿವಾಸಿ ಹನುಮಪ್ಪ ಬಿಸಳ್ಳಿ ಎಂಬ ವ್ಯಕ್ತಿಯ ಮಗಳೊಂದಿಗೆ ವಿವಾಹ ಪ್ರಸ್ತಾಪ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾತ್ರವಲ್ಲದೇ ಗೋವಾದ ನಿವಾಸಿ ಹನುಮಪ್ಪ ಬಿಸಳ್ಳಿ ಎಂಬವರ ಪುತ್ರಿಗೆ ವಾಟ್ಸ್‌ಆಯಪ್‌ನಲ್ಲಿ ಅಂಚೆ ಇಲಾಖೆಗೆ ಸಂಬಂಧಿಸಿದಂತೆ ತನಗೆ ರಾಜ್ಯೋತ್ಸವ ಮತ್ತು ಮೇಘದೂತ ಪ್ರಶಸ್ತಿ ಬಂದಿರುವ ದೃಶ್ಯಾವಳಿಗಳನ್ನು ಕಳುಹಿಸಿದ್ದ. ತನ್ನ ಮಗಳಿಗೆ ನೆಂಟಸ್ಥಿಕೆ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯ ಬಗ್ಗೆ ಹನುಮಪ್ಪ ಮಂಗಳೂರಿನ ಅಂಚೆ ಇಲಾಖೆಯಲ್ಲಿ ವಿಚಾರಿಸಿದಾಗ ಆತ ವಂಚಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಡಿಸೆಂಬರ್ 20 ರಂದು ಆರೋಪಿಯು ಮಂಗಳೂರು ನಗರದ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಗೆ ಅಂಚೆ ಇಲಾಖೆಯಲ್ಲಿನ ಗ್ರೇಡ್ 1 ಮತ್ತು ಗ್ರೇಡ್ 2 ಹುದ್ದೆ ಖಾಲಿ ಇರುವುದಾಗಿ ನಂಬಿಸಿ 6 ಲಕ್ಷ ರೂ. ನಗದು ಪಡೆದು ವಂಚಿಸಿದ್ದ. ಪೊಲೀಸ್‌ ಸಿಬ್ಬಂದಿಗಳನ್ನು ವಂಚಿಸಲು ಪರಮೇಶ್ವರಪ್ಪ ಅಂಚೆ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಪೂಜಾ ಸಿ ಎನ್ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ವಿವಿಧ ನಮೂನೆಯ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇಲ್ಲಿಯವರೆಗೆ ಫೇಸ್‌ಬುಕ್‌ನಲ್ಲಿ ಸುಮಾರು 20 ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾನೆ. ಬೇರೆ ಬೇರೆ ಹೆಸರಿನಿಂದ ಖಾತೆ ತೆರೆದಿದ್ದು, ಅಂಚೆ, ಪೊಲೀಸ್, ಅರಣ್ಯ, ಕೆಪಿಟಿಸಿಎಲ್, ಶಿಕ್ಷಣ ಇಲಾಖೆ ಸಹಿತ ಇತರ ಸರಕಾರಿ ಇಲಾಖೆಗಳ ಉತ್ತಮ ದರ್ಜೆಯ ಅಧಿಕಾರಿ ಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ್ದ. ಅಧಿಕಾರಿಗಳ ಜೊತೆಗಿನ ‘ಫೇಸ್‌ಬುಕ್ ಸ್ನೇಹ’ವನ್ನು ಪ್ರಭಾವದಂತೆ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲಿನ ಪ್ರಕರಣಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಸೈಬರ್ ಕ್ರೈಂ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖಾ ಅಧಿಕಾರಿ ಡಿಸಿಪಿ ಹರಿರಾಮ್ ಶಂಕರ್ ಅವರ ಮೇಲ್ವಿಚಾರಣೆಯಲ್ಲಿ, ಸೈಬರ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್, ತನಿಖಾ ಅಧಿಕಾರಿ ಬಿ.ಸಿ.ಗಿರೀಶ್ ಕಾರ್ಯ ನಿರ್ವಹಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಇಲ್ಲಿಯವರೆಗೆ 13 ಮಂದಿಯನ್ನು ವಂಚಿಸಿದ್ದಾನೆ. ಸುಮಾರು 15ರಿಂದ 20 ಲಕ್ಷ ರೂ. ವಂಚಿಸಿ, ಸರಕಾರಿ ಅಧಿಕಾರಿಗಳನ್ನೂ ವಂಚಿಸಿರುವುದಾಗಿ ತಿಳಿದುಬಂದಿದೆ. ಸದ್ಯ ಈತ ಸುಮಾರು 75 ಜನರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕದಲ್ಲಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಯಿಂದ ಲ್ಯಾಪ್‌ಟಾಪ್, ಐದು ಮೊಬೈಲ್‌ಗಳು, ಅಂಚೆ ಇಲಾಖೆಯ ನಕಲಿ ಗುರುತಿನ ಚೀಟಿ, ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಕಾರ್ಡ್‌ವೊಂದನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ವಸ್ತುಗಳ ಸೊತ್ತಿನ ಮೌಲ್ಯ 1.35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಯನ್ನು ನಗರದ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪರಮೇಶ್ವರಪ್ಪನ ಕೊರೊನಾ ಪರೀಕ್ಷಾ ವರದಿ ಬಾಕಿ ಇರುವುದರಿಂದ ಆತನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.

 

Comments are closed.