ಕರಾವಳಿ

ಶಾಸಕ ಯು.ಟಿ. ಖಾದರ್‌ ಅವರ ಕಾರನ್ನು ಬೆನ್ನಟ್ಟಿ ಬಂದ ದುಷ್ಕರ್ಮಿಗಳ ಬೈಕ್‌ನ ಸುಳಿವು ಪತ್ತೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.24: ಶಾಸಕ ಯು.ಟಿ. ಖಾದರ್‌ ಅವರ ಕಾರನ್ನು ಇಬ್ಬರು ದುಷ್ಕರ್ಮಿಗಳು ಬೆನ್ನಟ್ಟಿ ಬಂದು ಅನಂತರ ತಪ್ಪಿಸಿಕೊಂಡಿರುವ ಘಟನೆ ಬುಧವಾರ ನಡೆದಿದ್ದು, ಬೈಕ್‌ನ ಸುಳಿವು ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

ಖಾದರ್‌ ಅವರು ಬುಧವಾರ ರಾತ್ರಿ 7.45ರ ಸುಮಾರಿಗೆ ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣದತ್ತ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ದೇರಳಕಟ್ಟೆ ಬಳಿ ಬೈಕೊಂದು ಎರಡು ಬಾರಿ ಅವರ ಕಾರಿನ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಹಾದು ಹೋಗಿತ್ತು. ಸುಮಾರು ಹತ್ತು ಕಿ.ಮೀ. ವರೆಗೂ ಖಾದರ್ ಅವರ ಕಾರಿನ ಹಿಂದೆ ಅಪರಿಚಿತರು ಬಂದಿದ್ದು, ಅನುಮಾನ ಬಂದು ಖಾದರ್ ಎಸ್ಕಾರ್ಟ್ ವಾಹನದ ಪೊಲೀಸರು ಬೈಕ್ ಸವಾರರನ್ನು ನಂತೂರು ಬಳಿ ನಿಲ್ಲಿಸುವಷ್ಟರಲ್ಲಿ ಅವರು ಪರಾರಿಯಾಗಿದ್ದರು.

ಈ ಬಗ್ಗೆ ಖಾದರ್ ಎಸ್ಕಾರ್ಟ್ ವಾಹನದ ಎಎಸ್ಸೈ ಸುಧೀರ್ ಮಾಹಿತಿ ನೀಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬೈಕ್ ನಂಬರ್ ನೋಟ್ ಮಾಡಿಕೊಂಡ ಪೊಲೀಸರು ವಿಳಾಸ ಪತ್ತೆಗಿಳಿದಿದ್ದಾರೆ. ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ಕಾರನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಬೆಂಗಾವಲು ಪಡೆಯ ಅಧಿಕಾರಿಗಳು ಗಮನಿಸಿದ್ದರು. ನಂತೂರು ಬಳಿ ಬರುವಾಗ ಬೈಕನ್ನು ತಡೆದು ವಿಚಾರಿಸಲು ಮುಂದಾಗಿದ್ದು, ಅಷ್ಟರಲ್ಲಿ ಅವರು ತಪ್ಪಿಸಿಕೊಂಡರು ಎಂದು ಎಸ್ಕಾರ್ಟ್‌ ಸಿಬಂದಿ ತಿಳಿಸಿದ್ದಾರೆ. ಆಗಲೇ ಈ ವಿಚಾರ ನನ್ನ ಗಮನಕ್ಕೆ ಬಂದಿರುವುದು. ನನಗೆ ಜೀವ ಬೆದರಿಕೆ ಇದೆ ಎಂಬ ಕಾರಣದಿಂದಲೇ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಬೆಂಗಾವಲು ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ, ಸದ್ಯಕ್ಕೆ ಯಾವುದೇ ಸಮಸ್ಯೆ ಆಗಲಿಲ್ಲ’ ಎಂದು ಮಾಜಿ ಸಚಿವ ಹಾಲಿ ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.

Comments are closed.