ಕರಾವಳಿ

ಅಪಘಾತ ವಲಯವಾಗುತ್ತಿರುವ ಮುಕ್ಕ ಟೋಲ್ ಗೇಟ್! :ಪ್ರಾಣ ಕೈಯಲ್ಲಿ ಹಿಡಿದು ಸಂಚಾರಿಸುತ್ತಿರುವ ವಾಹನ ಸವಾರರು

Pinterest LinkedIn Tumblr

ಮಂಗಳೂರು/ ಸುರತ್ಕಲ್ : ಮಂಗಳೂರು – ಉಡುಪಿ ರಾ. ಹೆದ್ದಾರಿ 66ರ ಸುರತ್ಕಲ್ ಸಮೀಪದ ಎನ್ ಐಟಿಕೆ ಟೋಲ್ ಗೇಟ್ ನಿಂದ ಕೂಗಳತೆ ದೂರದ ಮುಂಚೂರು ಕ್ರಾಸ್ ಮತ್ತು ಪಡ್ರೆ ಕ್ರಾಸ್ ಬಳಿ ದಿನನಿತ್ಯ ಎನ್ನುವಂತೆ ಅಪಘಾತ ನಡೆಯುತ್ತಿದ್ದು ವಾಹನ ಸವಾರರು ಅದರಲ್ಲೂ ದ್ವಿಚಕ್ರ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.

ಎರಡೂ ಕಡೆ ರಸ್ತೆ ಡಿವೈಡರ್ ಅನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು ಇದರಿಂದ ಸರಣಿ ಅಪಘಾತ ಸಂಭವಿಸುತ್ತಿದ್ದರೂ ಸಂಬಂಧ ಪಟ್ಟ ಇಲಾಖೆ, ಹೆದ್ದಾರಿ ಪ್ರಾಧಿಕಾರ ಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಳೆದ ವಾರ ಮುಂಚೂರು ಕ್ರಾಸ್ ಬಳಿ ಮೀನಿನ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆ ಬಳಿಕ ಇಲ್ಲಿ ತಾತ್ಕಾಲಿಕವಾಗಿ ಬ್ಯಾರಿಕೇಡ್ ಇರಿಸಲಾಗಿದೆ. ಆದರೆ ಎಕ್ಸ್ ಪ್ರೆಸ್ ಬಸ್, ಲಾರಿಗಳು ಬ್ಯಾರಿಕೇಡ್ ಇದ್ದರೂ ಸಡನ್ನಾಗಿ ತಿರುವು ಪಡೆದು ಅತೀವೇಗದಲ್ಲಿ ಸಂಚರಿಸುವುದು ಮತ್ತೊಂದು ಅಪಾಯ ಸೃಷ್ಟಿಸುವ ದಿನ ದೂರವಿಲ್ಲ.

ಇನ್ನು ಟೋಲ್ ಗೇಟ್ ನಿಂದ ಮುಕ್ಕ ಕಡೆಗೆ ಸಾಗುವಲ್ಲಿ ಪಡ್ರೆ ಕ್ರಾಸ್ ನಲ್ಲಿ ದಿನನಿತ್ಯ ಸಣ್ಣಪುಟ್ಟ ಅಪಘಾತ ನಡೆಯುತ್ತಲೇ ಇವೆ. ಇಲ್ಲಿ ತಿರುವಿನಲ್ಲಿ ಮಣ್ಣಿನ ರಸ್ತೆ ಇರುವ ಕಾರಣ ಎರಡೂ ಬದಿಯಿಂದ ವಾಹನಗಳು ಹೆದ್ದಾರಿಗೆ ನುಗ್ಗುವುದು, ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಕಕ್ಕಾಬಿಕ್ಕಿಯಾಗಿ ಅಪಘಾತ ಎಸಗುತ್ತಿರುವುದು ಮಾಮೂಲಾಗಿ ಹೋಗಿದೆ.

ಇಲ್ಲಿ ಮೀನು, ಹಣ್ಣು ಖರೀದಿಗೆ, ಪೆಟ್ರೋಲ್ ಹಾಕಿಸಲು ವಾಹನವನ್ನು ಯರ್ರಾಬಿರ್ರಿಯಾಗಿ ಚಲಾಯಿಸುವುದು ಮುಂದೊಂದು ದಿನ ದೊಡ್ಡ ಅನಾಹುತಕ್ಕೆ ಕಾರಣವಾಗುವ ದಿನ ದೂರವಿಲ್ಲ. ಕೆಲವು ವರ್ಷಗಳ ಹಿಂದೆ ಇಲ್ಲಿ ತಿರುವು ಪಡೆಯುವ ವೇಳೆ ರಿಕ್ಷಾಕ್ಕೆ ಲಾರಿ ಅಪ್ಪಳಿಸಿದ್ದ ಪರಿಣಾಮ ಮಕ್ಕಳಿಬ್ಬರ ಸಮೇತ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ ನಡೆದಿತ್ತು. ಈ ಬಳಿಕ ಇಲ್ಲಿ ತಾತ್ಕಾಲಿಕ ಡಿವೈಡರ್ ಇರಿಸಿದ್ದರೂ ಅದನ್ನು ತೆಗೆಯಲಾಗಿದೆ. ಸ್ಥಳೀಯ ಎನ್ ಐಟಿಕೆ ಶಿಕ್ಷಣ ಸಂಸ್ಥೆ, ಸ್ಥಳೀಯರು ಈ ಕುರಿತು ಮಾಡಿರುವ ಮನವಿಗಳು ಮೂಲೆ ಸೇರಿವೆ.

ಹೆದ್ದಾರಿಯಲ್ಲೇ ಮಾರ್ಕೆಟ್! :

ಮುಕ್ಕ ಟೋಲ್ ಗೇಟ್ ಸಮೀಪದ ಪಡ್ರೆ ಕ್ರಾಸ್ ಬಳಿ ಹೆದ್ದಾರಿಯಲ್ಲೇ ಮೀನು, ತರಕಾರಿ, ಎಳನೀರು, ಹಣ್ಣು ಮಾರಾಟ ಭರದಿಂದ ನಡೆಯುತ್ತಿದ್ದು ಮಾರ್ಕೆಟ್ ಸೃಷ್ಟಿಯಾಗಿದೆ. ಇಲ್ಲಿಗೆ ಬರುವ ವಾಹನ ಸವಾರರು ಹೆದ್ದಾರಿಯಲ್ಲೇ ವಾಹನ ನಿಲ್ಲಿಸಿ ಖರೀದಿ ಮಾಡುವುದು, ಸಡನ್ನಾಗಿ ಬ್ರೇಕ್ ಹಾಕುವುದು, ರಾಂಗ್ ಸೈಡಲ್ಲಿ ಬರುವುದು, ತಿರುವಿನಲ್ಲಿ ಏಕಾಏಕಿ ಹೆದ್ದಾರಿಗೆ ನುಗ್ಗುವುದು ಅಪಾಯಕ್ಕೆ ಕಾರಣವಾಗುತ್ತಿದೆ.

ಇಲ್ಲಿ ಸಂಜೆಯ ವೇಳೆ ಪಾದಚಾರಿಗಳು,ಎನ್ ಐಟಿಕೆ ವಿದ್ಯಾರ್ಥಿಗಳು ನಡೆದಾಡಲೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ತಾತ್ಕಾಲಿಕ ಮಾರ್ಕೆಟ್ ನಿಂದ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕಿದೆ.

Comments are closed.