ಕರಾವಳಿ

ಪಚ್ಚನಾಡಿ ತ್ಯಾಜ್ಯ ದುರಂತ ಸ್ಥಳಗಳಿಗೆ ಭೇಟಿ ನೀಡಿದ ನ್ಯಾಯಾಧೀಶರಲ್ಲಿ ಅಳಲು ತೋಡಿಕೊಂಡ ಸಂತ್ರಸ್ತರು

Pinterest LinkedIn Tumblr

ಮಂಗಳೂರು, ಡಿಸೆಂಬರ್.16: ಪಚ್ಚನಾಡಿ ತ್ಯಾಜ್ಯ (ಭೂಕುಸಿತ) ದುರಂತದಿಂದ ಹಲವಾರು ಮನೆಗಳಿಗೆ ಹಾನಿಗೊಳಗಾಗಿರುವ ಕುಡುಪು ಮಂದಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಶಿಲ್ಪಾ ಎ.ಜಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೈಕೋರ್ಟ್ ನಿರ್ದೇಶನದಂತೆ ನ್ಯಾಯವಾದಿಗಳನ್ನು ಒಳಗೊಂಡ ಪ್ರಾಧಿಕಾರದ ಸದಸ್ಯರು ನ್ಯಾಯಾಧೀಶೆ ಶಿಲ್ಪಾ ಎ.ಜೆ. ನೇತೃತ್ವದಲ್ಲಿ ಮಹಾನಗರ ಪಾಲಿಕೆ ಕಲ್ಪಿಸಿರುವ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಸಂತ್ರಸ್ತರು ನ್ಯಾಯಾಧೀಶರ ಮುಂದೆ ತಮ್ಮ ನೋವನ್ನು ತೋಡಿಕೊಂಡರು.

‘ಪಚ್ಚನಾಡಿ ತ್ಯಾಜ್ಯ ದುರಂತದಿಂದ ಕುಡಿಯುವ ಜಲಮೂಲ ಕಲುಷಿತಗೊಂಡ ಏಳು ಕುಟುಂಬಗಳಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯು ಹೈಕೋರ್ಟ್‌ಗೆ ಅಫಿಡವಿಟ್ ನೀಡಿತ್ತು.

ಪಚ್ಚನಾಡಿಗೆ ನ್ಯಾಯಾಧೀಶರು ಭೇಟಿ ನೀಡಿದ ಸಂದರ್ಭ ಸಂತ್ರಸ್ತರು ತಮ್ಮ ನೋವುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ‘ಪಚ್ಚನಾಡಿ ವಾರ್ಡ್ ವ್ಯಾಪ್ತಿಯಲ್ಲಿ ನನ್ನ ಮನೆ ಇದ್ದು, ಪ್ರತಿನಿತ್ಯ ನೀರು ಬರುತ್ತಿದೆ. ಆದರೆ, ಕುಡುಪು ವಾರ್ಡ್‌ನಲ್ಲಿ ಉಳಿದ ಆರು ಕುಟುಂಬಗಳ ಮನೆ ಇದ್ದು, ಎರಡು ದಿನಕ್ಕೊಮ್ಮೆ ನೀರು ಬರುತ್ತಿದೆ’ ಎಂದು ಮಂದಾರ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.

‘ನಮ್ಮ ಹೊಲದಲ್ಲಿರುವ ಬಾವಿ ನೀರು ಸಂಪೂರ್ಣ ಕಲುಷಿತಗೊಂಡಿದೆ. ಕೃಷಿಗಾಗಿ ಬೇರೆಡೆಯಿಂದ ನೀರು ತರಬೇಕಾಗಿದೆ’ ಎಂದು ಕುಲ ಶೇಖರಕ್ಕೆ ಸ್ಥಳಾಂತರಿಸಲಾದ 19 ಕುಟುಂಬಗಳ ಸಂತ್ರಸ್ತರು ದೂರು ನೀಡಿದರು.

ತುಳುವಿನ ಮಂದಾರ ರಾಮಾಯಣದ ಸಾಹಿತಿ ಕೇಶವ ಭಟ್ಟ ಅವರ ಮನೆ ಹಾನಿಗೀಡಾಗಿದ್ದು, ನೆರವು ನೀಡಬೇಕು ಎಂದು ಅವರ ಕುಟುಂಬಸ್ಥರು ಹಾಗೂ ಸ್ಥಳೀಯರು ಮನವಿ ಮಾಡಿದರು. ನ್ಯಾಯಾಧೀಶೆ ಶಿಲ್ಪಾ ಎ.ಜಿ. ಅವರು ಈ ಎಲ್ಲಾ ಸಮಸೈಗಳ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Comments are closed.