ಕರಾವಳಿ

ಬಾಲಕಾರ್ಮಿಕರನ್ನು ದುಡಿಸುವವರ ವಿರುದ್ಧ ಸಮರ: ನಗರದ ವಿವಿಧೆಡೆಗಳಿಗೆ ಕಾರ್ಮಿಕ ಇಲಾಖೆ ದಾಳಿ

Pinterest LinkedIn Tumblr

ಮಂಗಳೂರು, ಡಿಸೆಂಬರ್. 15: ಬಾಲಕಾರ್ಮಿಕರನ್ನು ದುಡಿಸುವವರ ವಿರುದ್ಧ ಸಮರಸಾರಿರುವ ಕಾರ್ಮಿಕ ಇಲಾಖೆ ನಗರದ ವಿವಿಧೆಡೆಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಅನಿಷ್ಟ ಪಿಡುಗು ಆಗಿದ್ದು, ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕರನ್ನು ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಆದರೂ ಹಲವೆಡೆಗಳಲ್ಲಿ ಬಾಲಕರನ್ನು ಕೆಲಸಕ್ಕೆ ನೇಮಿಸಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ನಗರದ ಅಪಾರ್ಟ್‌ಮೆಂಟ್‌ಗಳು, ಹೊಟೇಲ್, ಗ್ಯಾರೇಜ್‌ಗಳು ಸೇರಿದಂತೆ ಹಲವು ಕಡೆಗಳಲ್ಲಿ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲನೆ ನಡೆಸಿತು.

15ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಕಾಯ್ದೆ ಉಲ್ಲಂಘಿಸಿದ ಮಾಲಕರಿಗೆ 50,000 ರೂ.ವರೆಗೆ ದಂಡ ಹಾಗೂ ಎರಡು ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು. ತಪ್ಪಿತಸ್ಥ ಮಾಲಕರ ವಿರುದ್ಧ ಎಫ್‌ಐಆರ್ ಸಹ ದಾಖಲಿಸಲಾಗುವುದು.

ಕೋವಿಡ್ ಸಮಯದಲ್ಲಿ ಮಕ್ಕಳನ್ನು ಬಾಲಕಾರ್ಮಿಕತೆಯಿಂದ ಮುಕ್ತವಾಗಿಸಲು ಹಿಂದಿಗಿಂತಲೂ ಹೆಚ್ಚು ಜಾಗರೂಕತೆ ವಹಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಮಂಗಳೂರು ನಗರದ ಅಪಾರ್ಟ್‌ಮೆಂಟ್‌ಗಳು, ಹೊಟೆಲ್, ಗ್ಯಾರೇಜ್‌ಗಳಿಗೆ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.

ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕ ಕಾಯ್ದೆಯ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಸ್ಟಿಕ್ಕರ್ ಮತ್ತು ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು.

ದಾಳಿಯಲ್ಲಿ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಜೀವನ್ ಕುಮಾರ್, ಮೇರಿ ಪಿ. ಡಯಾಸ್, ವಿರೇಂದ್ರ ಕುಂಬಾರ್ ಹಾಗೂ ಯೋಜನಾ ನಿರ್ದೇಶಕ ಶ್ರೀನಿವಾಸ್ ಪಾಲ್ಗೊಂಡಿದ್ದರು.

ಸಾರ್ವಜನಿಕರು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ಚೈಲ್ಡ್‌ಲೈನ್ ಸಂಖ್ಯೆ 1098, ಕಾರ್ಮಿಕ ಇಲಾಖೆಯ ದೂ.ಸಂ.: 0824- 2435343, 2433132, 2437479 ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ದೂ.ಸಂ.: 2433131ಗೆ ಕರೆ ಮಾಡಿ ತಿಳಿಸಲು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.