ಕರಾವಳಿ

ಮಂಗಳೂರಿನಿಂದ ಮಾಲ್ದೀವ್ಸ್‌ಗೆ ಪ್ರಥಮ ಬಾರಿಗೆ ಸರಕು ಸಾಗಾಟ

Pinterest LinkedIn Tumblr

ಮಂಗಳೂರು: ಮಂಗಳೂರು ಹಳೆ ಬಂದರಿನಿಂದ ದ್ವೀಪ ರಾಷ್ಟ್ರ ಮಾಲ್ದಿವ್ಸ್‍ಗೆ ಪ್ರಥಮ ಬಾರಿಗೆ ಸರಕು ಸಾಗಾಟ ನೌಕೆ ಇಂದು ಹೊರಡಿತು.

ಕೃಷಿ, ತೋಟಕ್ಕೆ ಗೊಬ್ಬರವಾಗಿ ಬಳಸಲು ತೆಂಗಿನ ಗೆರಟೆ ಹುಡಿ, ತರಕಾರಿ ಮತ್ತು ಹಣ್ಣು ಹಂಪಲು ಸಾಗಾಟ ಮಾಡಲಿರುವ ನೌಕೆಗೆ ಭಾನುವಾರ ಕ್ರೇನ್‍ಗಳ ಮೂಲಕ ಲೋಡಿಂಗ್ ನಡೆಸಲಾಯಿತು.

ಕ್ಯಾಪ್ಟನ್ ಕಣ್ಣನ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಾತೋರಾಯನ್, ಹರಿದಾಸ್, ಸಗಾಯಂ, ಶ್ರಿನಿವಾಸನ್, ವಿಘ್ನೇಶ್ ಪ್ರಥಮ ಯಾನದಲ್ಲಿ ತೆರಳಿದ್ದಾರೆ. ಲಕ್ಷದ್ವೀಪದ ಕಡಂಬತ್ತ್‍ಕಾರ್‍ಗೆ ಸೇರಿದ ಎಂಎಸ್‍ವಿ ನೂರ್ ಎ ಅಲ್ ಕದರಿ ಹೆಸರಿನ ನೌಕೆಯನ್ನು ಚರಣ್‍ದಾಸ್ ವಿ.ಕರ್ಕೇರ ಬಾಡಿಗೆಗೆ ಪಡೆದುಕೊಂಡು, ಸಾಮಾನು ಸರಂಜಾಮು ಸಾಗಾಟ ಮಾಡುತ್ತಿದ್ದಾರೆ.

ನೌಕೆಯನ್ನು ಮಾಸಿಕ ಐದು ಲಕ್ಷ ರೂ. ಬಾಡಿಗೆಗೆ ಪಡೆದುಕೊಂಡಿದ್ದು, ತಿಂಗಳಿಗೆ ಎರಡು ಟ್ರಿಪ್ ಮಾಡಲಿದೆ. ಸೋಮವಾರ ಬೆಳಗ್ಗೆ ನದಿ ನೀರು ಉಬ್ಬರ ಹೆಚ್ಚಾದಾಗ, ಹೊರಟು, 4-5 ದಿನಗಳಲ್ಲಿ ತಲುಪಿ, ಮಾಲ್ದೀವ್ಸ್ ಜೆಟ್ಟಿಯಲ್ಲಿ ಅನ್‍ಲೋಡ್ ಮಾಡಿ, ಮರಳಿ ಬರಲಿದೆ. ಹೊಸ ಸಾಹಸಕ್ಕೆ ಕೈ ಹಾಕಿದ್ದೇವೆ ಎನ್ನುತ್ತಾರೆ ಚರಣ್‍ದಾಸ್.

ಕಳೆದ ವರ್ಷ ಒಂದು ನೌಕೆ ಹೋಗಿದ್ದರೂ, ಅದು ಗುರಿ ತಲುಪಿರಲಿಲ್ಲ. ಅದರಲ್ಲಿದ್ದ ಸಾಮಾನು ಸರಂಜಾಮು ಸಮುದ್ರ ಪಾಲಾಗಿತ್ತು. ಈ ವರ್ಷ ಅಕ್ಟೋಬರ್ ನಲ್ಲಿ ಹೊರಡಬೇಕಿತ್ತು. ಕೋವಿಡ್ ಮತ್ತಿತರ ಕಾರಣಗಳಿಂದ ತಡವಾಗಿದೆ. ಸುಮಾರು 200 ಟನ್ ಸರಕು ಸಾಗಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಲೋಡಿಂಗ್ ಮಾಡುವ ಮಲ್ಲೂರಿನ ಇಬ್ರಾಹಿಂ ಮತ್ತು ಸತ್ತಾರ್.

Comments are closed.